ಬಾಗಲಕೋಟೆ, ಜು.30(DaijiworldNews/AK): ಅನಗತ್ಯವಾಗಿ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಜಿಲ್ಲಾಧಿಕಾರಿ , ಎಸ್ಪಿಗಳಿಗೆ ಸೂಚನೆ ಕೊಟ್ಟದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ಘಟಪ್ರಭಾ ನದಿ ಪ್ರವಾಹಕ್ಕೆ ಬಾಗಲಕೋಟೆ ಜಿಲ್ಲೆಯ ನೂರಾರು ಕುಟುಂಬಗಳು ತತ್ತರಿಸಿದ್ದು, ಈ ಹಿನ್ನಲೆ ನೆರೆ ಪೀಡಿತ ಪ್ರದೇಶಕ್ಕೆ ಇಂದು ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ಜನತೆ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಅಧಿಕಾರಿಗಳ ಮಾತು ಕೇಳದೆ ನದಿಗೆ ಇಳಿದರೆ ಲಾಠಿ ಪ್ರಯೋಗ ಮಾಡಲು ಸೂಚಿಸಿದ್ದೇನೆ ಎಂದರು.
ಮೀನು ಹಿಡಿಯುವುದು, ಕೃಷಿ ಚಟುವಟಿಕೆ ಎಂದು ಇಳಿಯುವುದು, ಸೆಲ್ಫಿಗಾಗಿ ನದಿ ಅಥವಾ ಹೊಳೆಗೆ ಇಳಿಯುವವರು ಒಳ್ಳೆ ಮಾತಿಗೆ ಗೌರವ ಕೊಡಲಿಲ್ಲ ಅಂದರೆ ಲಾಠಿ ಏಟು ಖಚಿತ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗುವುದಕ್ಕೆ ನಾವು ಬಿಡುವುದಿಲ್ಲ. ನಮ್ಮ ಪುಣ್ಯ ಎರಡು ದಿನದಿಂದ ಮಳೆ ಕಡಿಮೆ ಆಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನಮಗೆ ಕಡಿಮೆ ಹಾನಿ ಆಗಿದೆ. 2019-20 ರಲ್ಲಿ 272 ಜನ ಮಳೆಗಾಲದಲ್ಲಿ ಸಾವಿಗೀಡಾದರೆ, 2022 ರಲ್ಲಿ 249 ಜನರ ಸಾವನ್ನಪ್ಪಿದ್ರು. ಅದಕ್ಕೆ ಹೋಲಿಕೆ ಮಾಡಿದ್ರೆ 243 ಸಾವು ಆಗಿದೆ ಎಂದರು.