ತಿರುವನಂತಪುರಂ, ಜು.30(DaijiworldNews/A):ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಈವರೆಗೆ 93 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅಂತಿಮ ಅಂಕಿ-ಅಂಶವಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಯನಾಡಲ್ಲಿ ಪ್ರಕೃತಿ ಪ್ರಕೋಪ ಆಗಿದ್ದು, ನಸುಕಿನ ಜಾವ 2 ಗಂಟೆ ಸುಮಾರಿಗೆ ಮೊದಲ ಜಲ ಸ್ಫೋಟ ಸಂಭವಿಸಿತ್ತು. 4.10ಕ್ಕೆ ಎರಡನೇ ಸ್ಫೋಟ ಉಂಟಾಗಿತ್ತು. ಐವರು ಸಚಿವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ. 18 ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. 34 ಮೃತದೇಹಗಳ ಗುರುತುಪತ್ತೆಯಾಗಿದ್ದೆ. 128 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ 93 ಮಂದಿ ಸಾವನ್ನಪ್ಪಿದ್ದಾರೆ. ಕೆಲವು ಗುರುತು ಪತ್ತೆಹಚ್ಚಲು ಸಾಧ್ಯವಾಗದ ಮೃತದೇಹಗಳಿವೆ ಎಂದು ಸಿಎಂ ಪಿಣರಾಯಿ ಅಧಿಕೃತ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್ ಸಿದ್ಧವಿದೆ. ಆದ್ರೆ ಪ್ರತಿಕೂಲ ಹವಾಮಾನದಿಂದಾಗಿ ಹಾರಾಟ ಸಾಧ್ಯವಾಗಿಲ್ಲ. ಇನ್ನೂ ಬೆಂಗಳೂರಿನಿಂದ ಬರುವ ತಂಡಕ್ಕೆ ಟ್ರಾಫಿಕ್ ಫ್ರೀ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ಸಂತ್ರಸ್ತರಿಗಾಗಿ 20,000 ಲೀಟರ್ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮದ್ರಸಾದಲ್ಲಿ ತಾತ್ಕಾಲಿಕ ಕ್ಲಿನಿಕ್ ವ್ಯವಸ್ಥೆ ಮಾಡಿದ್ದು, ವೈದ್ಯಕೀಯ ತಂಡವನ್ನು ನಿಯೋಜಿಸಿದ್ದೇವೆ