ಬೆಂಗಳೂರು, ಆ 1(DaijiworldNews/ AK): ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ.
ಬೆಂಗಳೂರಿನಿಂದ ಮೈಸೂರಿನ ವರೆಗೆ ಪಾದಯಾತ್ರೆ ಮಾಡಿ ಸಿಎಂಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಆದರೆ ಪಾದಯಾತ್ರೆಯಲ್ಲಿ ಪ್ರೀತಂಗೌಡ ಭಾಗಿಯಾಗುತ್ತಿರುವ ಕಾರಣಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೆಂಡಕಾರಿದ್ದು ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಯಾರೊಬ್ಬರೂ ಭಾಗಿಯಾಗುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
ಆದರೆ ಇದೀಗ ಹೆಚ್ಡಿಕೆ ಜೊತೆ ಚರ್ಚೆ ನಡೆಸಿರುವ ಜೆ.ಪಿ ನಡ್ಡಾ, ಪ್ರಹ್ಲಾದ್ ಜೋಶಿ ಅವರು ಹೆಚ್ಡಿಕೆಯನ್ನು ಮನವೊಲಿಸಿದ್ದಾರೆ. ಹೀಗಾಗಿ ಷರತ್ತ ಒಂದನ್ನು ಮುಂದೆ ಇಟ್ಟು ಪಾದಯಾತ್ರೆಗೆ ಬರುವಂತೆ ಹೆಚ್ಡಿಕೆ ತಿಳಿಸಿದ್ದಾರೆ.ಸದ್ಯ ಮೈತ್ರಿ ಪಕ್ಷದಲ್ಲಿ ಗೊಂದಲ ವ್ಯಕ್ತವಾದ ಹಿನ್ನೆಲೆ ಜೆ.ಪಿ ನಡ್ಡಾ, ಪ್ರಹ್ಲಾದ್ ಜೋಷಿ ಅವರು ಹೆಚ್ಡಿ ಕುಮಾರಸ್ವಾಮಿ ಅವರ ಮನವೊಲಿಸಲು ಪ್ರಯತ್ನಿಸಿದ್ದು ಈ ವೇಳೆ ಹೆಚ್ಡಿಕೆ ಒಂದು ಷರತ್ತು ಇಟ್ಟಿದ್ದಾರೆ.
ಪ್ರೀತಂಗೌಡ ಪಾದಯಾತ್ರೆಯಲ್ಲಿ ಇರಬಾರದು. ಹಾಗಿದ್ದಾಗ ಮಾತ್ರ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗುತ್ತೆ ಎಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಹೆಚ್ಡಿಕೆ ಷರತ್ತು ಹಾಕಿದ್ದಾರೆ.
ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು ಪ್ರೀತಂಗೌಡ ಯಾರು, ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತವರ ಜೊತೆಗೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ. ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ವಿರುದ್ಧ ತೀರ್ಮಾನವಾಗಿದೆ ಎಂದು ಈ ಹಿಂದೆ ಹೆಚ್ಡಿಕೆ ಕಿಡಿಕಾರಿದ್ದರು.