ನವದೆಹಲಿ, ಆ 1(DaijiworldNews/ AK): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಒಳ ಮೀಸಲಾತಿ ಕಾನೂನು ಬದ್ಧ ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ಕೋರ್ಟ್ ರಾಜ್ಯಗಳ ವಿವೇಚನೆಗೆ ನೀಡಿದೆ. ಮುಖ್ಯ ನ್ಯಾಯಮೂತ್ರಿ ಚಂದ್ರಚೂಡ್ ನೇತೃತ್ವದ ನ್ಯಾ. ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.
ನ್ಯಾಯಮೂರ್ತಿ ಬೇಲಾ ತ್ರಿವೇದಿ ಭಿನ್ನ ತೀರ್ಪು ನೀಡಿ ಅಂತಹ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ಪ್ರಕಟಿಸಿದರು.ಒಳ ಮೀಸಲಾತಿ ಸಂಬಂಧ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ಪ್ರಕಟಿಸಿತು. ಪಂಜಾಬ್, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಅಂತಹ ಉಪ-ವರ್ಗೀಕರಣವನ್ನು ಒದಗಿಸುವ ಕಾನೂನುಗಳ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ.