ಬೆಂಗಳೂರು,ಆ 2(DaijiworldNews/MS):ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಪೂರ್ವಾನುಮತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತಿರಸ್ಕರಿಸಬೇಕು ಮತ್ತು ಮುಖ್ಯಮಂತ್ರಿ ಅವರಿಗೆ ನೀಡಲಾಗಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ರಾಜ್ಯ ಸಚಿವರ ಪರಿಷತ್ ಸಭೆ ರಾಜ್ಯಪಾಲರಿಗೆ ಸಲಹೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಸಚಿವರ ಪರಿಷತ್ ಸಭೆ ನಡೆಸಲು ನಾಮನಿರ್ದೇಶನಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದು ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಬಳಿಕ ಸಚಿವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಸುದೀರ್ಘ ವಿವರಣೆ ನೀಡಿದರು.
ಶಾಸಕಾಂಗಸಭೆಯಲ್ಲಿ ಆಯ್ಕೆಯಾಗಿ ಸಿದ್ದರಾಮಯ್ಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕು. ಸರ್ಕಾರವನ್ನು ಪತನಗೊಳಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಜುಲೈ 5ರಂದು ರಾಜ್ಯ ರೈತ ಸಂಘದ ಒಕ್ಕೂಟ ರಾಜ್ಯಪಾಲರಿಗೆ ಮನವಿ ನೀಡಿತ್ತು. ಅದರ ಪ್ರಕಾರ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. 26ರಂದು ಮುಖ್ಯ ಕಾರ್ಯದರ್ಶಿ ಅವರು ಸುದೀರ್ಘವಾದ ವರದಿಯನ್ನು ಸಲ್ಲಿಸಿದ್ದರು. ಅದೇ ದಿನ ಖಾಸಗಿ ವ್ಯಕ್ತಿಯೊಬ್ಬರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆ-ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ನೀಡುವಂತೆ ಕೋರಿದರು. ಅದರೊಂದಿಗೆ ನೂರು ಪುಟಕ್ಕೂ ಹೆಚ್ಚಿನ ದಾಖಲಾತಿಗಳನ್ನು ಲಗತ್ತಿಸಲಾಗಿದೆ. ಖಾಸಗಿ ದೂರು ಹಾಗೂ ಮುಖ್ಯ ಕಾರ್ಯದರ್ಶಿ ವರದಿಯನ್ನು ಓದಲು ಸಮಯಾವಕಾಶವನ್ನು ಪಡೆಯದೇ ತರಾತುರಿಯಲ್ಲಿ ಜುಲೈ 26ರಂದೇ ಮುಖ್ಯಮಂತ್ರಿ ಅವರಿಗೆ ಶೋಕಾಸ್ ನೋಟಿಸ್ ನೀಡಿ , ಏಳು ದಿನ ಕಾಲಾವಕಾಶ ನೀಡಲಾಗಿತ್ತು. ಇಂದಿಗೆ ಅವಧಿ ಪೂರ್ಣಗೊಳ್ಳುತ್ತಿದೆ ಎಂದು ವಿವರಿಸಿದರು. ರಾಜ್ಯಪಾಲರ ಅಭಿಪ್ರಾಯದಂತೆ ರಾಜ್ಯ ಸರ್ಕಾರ ಮುಡಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಜೊತೆಗೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ವರದಿಗಳು ಬರುವ ಮುನ್ನವೇ ಅಭಿಯೋಜನೆಗೆ ಪೂರ್ವಾನುಮತಿ ಮಂಜೂರಾತಿಗೆ ಶೋಕಾಸ್ ನೋಟಿಸ್ ನೀಡಿರುವುದು ನಿಯಮಬಾಹಿರ ಎಂದರು.