ಬೆಂಗಳೂರು, ಆ 2(DaijiworldNews/ AK): ಕಾಂಗ್ರೆಸ್ ಪಕ್ಷ- ಸರಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಜಂಟಿಯಾಗಿ ನಡೆಸುವ ಮೈಸೂರು ಚಲೋ ಪಾದಯಾತ್ರೆಗೆ ನಾಳೆ (ಆ.3) ಬೆಳಿಗ್ಗೆ ಚಾಲನೆ ಸಿಗಲಿದೆ. ಭ್ರಷ್ಟ ಕಾಂಗ್ರೆಸ್ ಹಾಗೂ ಹಗರಣಗಳ ಸರಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರಕಾರ. ಕಾಂಗ್ರೆಸ್ ಸರಕಾರವು ಅಭಿವೃದ್ಧಿ ಶೂನ್ಯತೆಯ ಕೊಡುಗೆ ನೀಡಿದೆ. ಇದು ಅಸಮರ್ಥ ಸರಕಾರ ಎಂದು ಟೀಕಿಸಿದರು.
ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡಿ, ಸರಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಹಗರಣ, ಭ್ರಷ್ಟಾಚಾರ ಸಂಬಂಧ ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಮೊದಲು ಉತ್ತರಿಸಲಿ ಎಂದು ತಿಳಿಸಿದರು.
8 ದಿನಗಳ ಪಾದಯಾತ್ರೆ:
ಮಾಜಿ ಮುಖ್ಯಮಂತ್ರಿ- ರೈತ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ. ಶನಿವಾರ ಬೆಳಿಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. 8 ದಿನಗಳ ಪಾದಯಾತ್ರೆ ಇದಾಗಿರುತ್ತದೆ ಎಂದು ವಿಜಯೇಂದ್ರ ವಿವರಿಸಿದರು.
ನಾಳೆ ಸುಮಾರು 16 ಕಿಮೀ ಪಾದಯಾತ್ರೆ ಇರಲಿದೆ. ಎರಡನೇ ದಿನ ಭಾನುವಾರ ಮಂಜುನಾಥ ಕನ್ವೆನ್ಷನ್ ಹಾಲ್ ಬಿಡದಿಯಿಂದ ಆರಂಭಗೊಂಡು 22 ಕಿಮೀ, 5ರಂದು ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 6ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 5ನೇ ದಿನ ಮಂಡ್ಯ ಶಶಿಕಿರಣ್ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ 16 ಕಿಮೀ, 8ರಂದು ಗುರುವಾರ ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದು ಶುಕ್ರವಾರ ಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣಮಂಟಪದಿಂದ ಆರಂಭವಾಗಲಿದೆ. 10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದರು.
ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ ಎಂದು ವಿವರ ನೀಡಿದರು.