ಬೆಂಗಳೂರು, ಆ 2(DaijiworldNews/ AK): ಸರ್ಕಾರವನ್ನು ಬಿಜೆಪಿಯವರು ರಾಜ್ಯಪಾಲರನ್ನು ಇಟ್ಟುಕೊಂಡು ಹೆದರಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದೆವು. ಜನರಿಗೆ ಭರವಸೆಗಳನ್ನು ಕೊಟ್ಟಿದ್ದೆವು. ಭ್ರಷ್ಟಚಾರದಿಂದ ಕೂಡಿದ್ದ ಬಿಜೆಪಿಯನ್ನು ಕಿತ್ತೊಗೆದು ನಮಗೆ ಅಧಿಕಾರ ಕೊಡಿ. ಸಾಮಾಜಿಕ ನ್ಯಾಯ ನೀಡುವ ಆಡಳಿತ ನೀಡುವುದಾಗಿ ಹೇಳಿದ್ದೆವು. ಬಡವರು, ಶೋಷಿತರು, ಅಲ್ಪಸಂಖ್ಯಾತರನ್ನು ಮೇಲೆತ್ತಲು ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಕಾಂಗ್ರೆಸ್ ಪಕ್ಷ ಪೊಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಬಿಜೆಪಿಯವರು ಟೀಕಿಸಿದ್ದರು.
ಅಧಿಕಾರಕ್ಕೆ ಬಂದ ಕೂಡಲೇ ಭರವಸೆಗಳನ್ನು ಈಡೇರಿಸಿದ್ದೇವೆ. ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಕಾರ್ಯಗಳೆಲ್ಲವು ಸುಸಜ್ಜಿತವಾಗಿ ನಡೆಯುತ್ತಿವೆ. ಇದೆಲ್ಲವನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಇದೆಲ್ಲವನ್ನು ತಡೆಯಲು ಆಗದೆ ಹೊಟ್ಟೆಕಿಚ್ಚು, ಹೊಟ್ಟೆ ಹುರಿಯಿಂದ ಬಿಜೆಪಿಯವರು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಪಕ್ಷ 136 ಸೀಟು ಗೆದ್ದಿದ್ದಕ್ಕೆ, ರಾಜ್ಯದಲ್ಲಿ ನಮಗೆ ಜಾಗ ಇಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿಯವರಿಗೆ ಎಂಬುದು ಗೊತ್ತಾಗಿದೆ. ಇದೇ ಕಾರಣದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯೊಂದಿಗೆ ಕೈಜೋಡಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ಲಾಟ್ರಿ ಹೊಡೆದು, ಕೇಂದ್ರ ಸಚಿವರಾಗಿದ್ದಾರೆ. ನಮ್ಮ ಜೊತೆ ಸೇರಿಕೊಂಡು 14 ತಿಂಗಳ ನಂತರ ಬಿಟ್ಟು ಹೋದರು. ಮುಂದೆ ಬಿಜೆಪಿಯವರಿಗೆ ಗೊತ್ತಾಗಲಿದೆ. ನಿನ್ನೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.. ಹೆಚ್ಚು ದಿನ ಅವರ ಮೈತ್ರಿ ಉಳಿಯುವುದಿಲ್ಲ. ಶೀಘ್ರವಾಗಿ ಮುರಿದು ಬೀಳುತ್ತದೆ ಎಂದು ಹೇಳಿದರು.