ಶಿವಮೊಗ್ಗ, ಆ.03(DaijiworldNews/AA): ಮಳೆಯಿಂದಾಗಿ ಅನಧಿಕೃತ ಮನೆಗಳು ಬಿದ್ದರೂ 1.25 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 5 ಲಕ್ಷ ರೂ. ಪರಿಹಾರ ಕೊಡುತ್ತಾರೆ ಅಂತಾ ಅವರೇ ಮನೆ ಕೆಡವಿಕೊಂಡರು. ಕಳೆದ ಬಾರಿ ಪ್ರಭಾವ ಇದ್ದವರು 5 ಲಕ್ಷ ರೂ. ಪಡೆದಿದ್ದರು. ಇನ್ನುಳಿದವರು 1 ಲಕ್ಷ ರೂ. ಪಡೆದಿದ್ದರು. ಆದರೆ ಈ ಬಾರಿ ಮನೆ ಬಿದ್ದವರಿಗೆ ಪೂರ್ತಿ ಮನೆ ಕಟ್ಟಿ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ವಾಲ್ಮೀಕಿ ನಿಗಮ ಹಗರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ವಿಧಾನಸಭೆಯೊಳಗೆ ಹಾಗೂ ಹೊರಗೂ ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಮುಡಾ ಹಗರಣ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಯತ್ನಾಳ್ ಕೂಡ ಅವರ ಪಕ್ಷದವರೇ. ವಿಜಯೇಂದ್ರ ಬಗ್ಗೆ ಯತ್ನಾಳ್ ಮಾತನಾಡ್ತಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯಿಸಲ್ಲ. ಡಿಕೆಶಿ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ? ವಿಜಯೇಂದ್ರ ಎಲ್ಲಿದ್ದರು, ಇವರು ಏನು ಕೆಲಸ ಮಾಡ್ತಿದ್ದರು? ವಿಜಯೇಂದ್ರ ಆಸ್ತಿ ಎಷ್ಟು, ಅವರ ಆಸ್ತಿ ಹೇಗೆ ಬಂತು ಹೇಳಬೇಕಲ್ಲ. ವಿಜಯೇಂದ್ರ ಮೇಲೂ ಕೇಸ್ ಇದೆ. ಬಡಾ ಸೈನ್, ಚೋಟಾ ಸೈನ್, ಮನಿ ಲ್ಯಾಂಡರಿಂಗ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.