ಕುಲು, ಆ.03(DaijiworldNews/AA): ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ವೇಳೆ 8 ಮಂದಿ ಸಾವನ್ನಪ್ಪಿದ್ದು, 190 ಕ್ಕೂ ಹೆಚ್ಚು ರಸ್ತೆಗಳ ಸಂಚಾರ ಬಂದ್ ಆಗಿದೆ. ಹಾಗೂ ಗುಡ್ಡಗಾಡು ರಾಜ್ಯದಲ್ಲಿ 60ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.
ಹಿಮಾಚಲ ಪ್ರದೇಶದ ಕುಲು, ಮಂಡಿ ಮತ್ತು ಶಿಮ್ಲಾ ಈ ಮೂರು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಮೂರು ಮೇಘಸ್ಫೋಟಗಳಿಂದ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ಸುಮಾರು 45 ಜನರು ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಡ್ರೋನ್ಗಳ ನಿಯೋಜನೆಯೊಂದಿಗೆ ಇಂದು ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ.
ಶುಕ್ರವಾರದಿಂದ ಜೋಗಿಂದರ್ನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನಂತರ ಗೋಹರ್, ಶಿಲಾರೂ, ಪೊಂಟಾ ಸಾಹಿಬ್, ಪಾಲಂಪುರ್, ಧರ್ಮಶಾಲಾ ಮತ್ತು ಚೋಪಾಲ್ನಲ್ಲಿ ಕೂಡ ಮಳೆ ಸುರಿದಿದೆ. ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ ಮಂಡಿಯಲ್ಲಿ 46, ಕುಲುವಿನಲ್ಲಿ 38 ಮತ್ತು ಶಿಮ್ಲಾದಲ್ಲಿ 15 ಸೇರಿದಂತೆ ಒಟ್ಟು 190 ರಸ್ತೆಗಳ ಸಂಚಾರ ಬಂದ್ ಮಾಡಲಾಗಿದೆ.