ನವದೆಹಲಿ, ಆ.05(DaijiworldNews/AK): ಹಿಮಾಂಶು ಕೌಶಿಕ್ ತನ್ನ ಕಠಿಣ ಪರಿಶ್ರಮದ ಬಲದಿಂದ ಈ ಸ್ಥಾನವನ್ನು ಸಾಧಿಸಿದ್ದಾರೆ. ಎಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಐಎಎಸ್ ಹಿಮಾಂಶು ಕೌಶಿಕ್ ದೆಹಲಿಯ ನಿವಾಸಿ. ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಕಾಲ ಕೆಲಸ ಮಾಡಿದ ನಂತರ ಸಿವಿಲ್ ಸರ್ವೀಸ್ ಗೆ ಸೇರಲು ನಿರ್ಧರಿಸಿದ್ದರು. ಇವರ ಜೀವನದ ತಿರುವಿನ ಯಶಸ್ಸಿನ ಕಥೆ ಇಲ್ಲಿದೆ.
ದೆಹಲಿಯ ನಿವಾಸಿ ಹಿಮಾಂಶು ಕೌಶಿಕ್ 2017 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು. ಐಎಎಸ್ ಹಿಮಾಂಶು ಕೌಶಿಕ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಇಂಜಿನಿಯರ್ ಮತ್ತು ತಾಯಿ ಸಂಸ್ಕೃತ ವಿಷಯದ ಶಿಕ್ಷಕಿ. ಹಿಮಾಂಶು ದೆಹಲಿಯಲ್ಲಿ ಬೆಳೆದು ಅಲ್ಲಿಂದ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಗಾಜಿಯಾಬಾದ್ನ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದರು. ಅವರು ಅಧ್ಯಯನದಲ್ಲಿ ಹೆಚ್ಚು ಬುದ್ಧಿವಂತರಲ್ಲ ಮತ್ತು ಎರಡು ಬಾರಿ ಪರೀಕ್ಷೆಗಳನ್ನು ಅನುತೀರ್ಣರಾಗಿದ್ದರು. ಹಿಮಾಂಶು ಬಿ.ಟೆಕ್ ನಲ್ಲಿ ಶೇ.65 ಅಂಕ ಪಡೆದಿದ್ದರು.
ಹಿಮಾಂಶು ಕೌಶಿಕ್ ಪದವಿ ಮುಗಿದ ನಂತರ ಮೂರು ವರ್ಷಗಳ ಕಾಲ ಸಾಫ್ಟ್ವೇರ್ ಡೆವಲಪರ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ ಅವರು ಸಿವಿಲ್ ಸರ್ವೀಸಸ್ ಹೋಗಲು ನಿರ್ಧರಿಸಿದ್ದರು. UPSC ಪರೀಕ್ಷೆಯ ತಯಾರಿಯ ಆರಂಭಿಕ ದಿನಗಳಲ್ಲಿ ಅವರು ತೊಂದರೆ ಎದುರಿಸಬೇಕಾಯಿತು. ನಂತರ ಅವರು ಕೋಚಿಂಗ್ ಗೆ ಸೇರಿದರು.
ಹಿಮಾಂಶು ಕೌಶಿಕ್ ಅವರ ಕಠಿಣ ಪರಿಶ್ರಮ ಮತ್ತು ತರಬೇತಿ ಮಾರ್ಗದರ್ಶನದಿಂದಾಗಿ UPSC ಪರೀಕ್ಷೆಗೆ ತನ್ನ ತಯಾರಿಯನ್ನು ಮುಂದುವರೆಸಿದರು. 2017 ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 77 ನೇ ರ್ಯಾಂಕ್ ಗಳಿಸಿದ್ದರು. ಅವರ ಯಶಸ್ಸು ಎಲ್ಲರನ್ನು ನಿಬ್ಬೆರಗುಗೊಳಿಸಿತು. ಅದೇ ಸಮಯದಲ್ಲಿ, ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳೂ ಯಶಸ್ವಿಯಾಗಬಹುದು ಎಂದು ಸಾಬೀತುಪಡಿಸಿದ್ದರು.