ಬೆಂಗಳೂರು, ಆ.05(DaijiworldNews/AA): ಯಾದಗಿರಿ ಮೃತ ಪಿಎಸ್ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಕೆಲಸ ನೀಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಘೋಷಿಸಿದ್ದಾರೆ.
ಯಾದಗಿರಿ ಪಿಎಸ್ಐ ಪರಶುರಾಮ್ ಸಾವು ಪ್ರಕರಣದ ಬಗ್ಗೆ ಮಾತನಾಡಿದ ಅವರು, ಪಿಎಸ್ಐ ಸಾವು ಪ್ರಕರಣ ಸಿಐಡಿಗೆ ನೀಡಲಾಗಿದೆ. ಅದರ ತನಿಖೆ ಮಾಡುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಿರೀಕ್ಷೆ ಮಾಡುತ್ತಿದ್ದೇವೆ. ಅದು ಬಂದ ಮೇಲೆ ಯಾಕೆ ಸಾವಾಗಿದೆ ಎಂದು ಗೊತ್ತಾಗುತ್ತದೆ. ನಾನು ನಾಡಿದ್ದು ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಪರಶುರಾಮ್ ಅವರ ಪತ್ನಿಗೆ ಪರಿಹಾರ ಮತ್ತು ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಉದ್ಯೋಗ ಕೊಡಲು ಸಿಎಂ ಮತ್ತು ನಾನು ಚರ್ಚೆ ಮಾಡಿದ್ದೇವೆ ಎಂದರು.
ಸಾವಿನ ಕೇಸ್ನಲ್ಲಿ ಕಾಂಗ್ರೆಸ್ ಶಾಸಕ ಮತ್ತು ಶಾಸಕನ ಪುತ್ರನ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿಐಡಿ ತನಿಖೆಗೆ ಕೊಡಲಾಗಿದೆ. ತನಿಖೆಯ ವರದಿ ಬರಲಿ. ತನಿಖೆಯಲ್ಲಿ ಶಾಸಕರು ಮತ್ತು ಅವರ ಪುತ್ರನ ಪಾತ್ರವಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.