ನವದೆಹಲಿ, ಮೇ21(Daijiworld News/SS): ಸಿದ್ದರಾಮಯ್ಯ ಎಲ್ಲ ಜಾತಿ - ಜನರ ನಾಯಕರೂ ಹೌದು. ಅವರು ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದುಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದೆ. ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲೂ ಕಾಂಗ್ರೆಸ್ನಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ಕೇವಲ ಒಂದು ಕ್ಷೇತ್ರ ನೀಡುವುದಾಗಿ ಅಲ್ಪ ಸಂಖ್ಯಾತ ಮುಖಂಡರ ಸಲಹೆಯ ಮೇರೆಗೆ ಕಾಂಗ್ರೆಸ್ ನಿರ್ಧರಿಸಿತ್ತು. ಆದರೂ ಪಕ್ಷದ ಮುಖಂಡರನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದರು.
ದಿನೇಶ್ ಗುಂಡೂರಾವ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲ ಜಾತಿ - ಜನರ ನಾಯಕರೂ ಹೌದು. ಅವರು ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಹಿರಿಯ ಮುಖಂಡರ ಕುರಿತು ಹೀಗೆ ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆ ಕುರಿತು ಪಕ್ಷವು ಆಂತರಿಕ ಚರ್ಚೆ ನಡೆಸಲಿದೆ. ಬೇಗ್ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಬದಲಾಗಲೂಬಹುದು. ಆದರೂ ಅವರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಬೇಗ್ ಅವರಿಗೆ ಬಿಜೆಪಿ ಮಾನಸಿಕ ಕಿರುಕುಳ ನೀಡಿದಾಗ ಕಾಂಗ್ರೆಸ್ ರಕ್ಷಿಸಿದೆ. ಅದನ್ನು ಮರೆತು ಬಿಜೆಪಿ ಹೊಗಳುವುದು ಸೂಕ್ತವಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯಿಂದಲೂ ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸಿದೆ. ಮುಸ್ಲಿಂ ನಾಯಕರೆಲ್ಲರ ಒಪ್ಪಿಗೆ ಮೇರೆಗೆ ರಾಜ್ಯದಲ್ಲಿ ಒಂದೇ ಟಿಕೆಟ್ ನೀಡಿದೆ. ಈ ವೇಳೆ ಬೇಗ್ ದಿಲ್ಲಿಯಲ್ಲಿ ಇದ್ದರು. ಕಾಂಗ್ರೆಸ್ ಹಿಂದೆಯೂ ಮುಸ್ಲಿಂ ನಾಯಕರನ್ನ ಪರಿಗಣಿಸಿದೆ. ಮುಂದೆಯೂ ಮುಸ್ಲಿಮರನ್ನು ಪರಿಗಣಿಸಲಿದೆ ಎಂದು ಅವರು ನುಡಿದರು.