ಬೆಂಗಳೂರು, ಆ.05(DaijiworldNews/AK): ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಈ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮೈಸೂರು ಚಲೋ ಪಾದಯಾತ್ರೆಯ 3ನೇ ದಿನದ ಅಂತ್ಯದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಉದ್ದೇಶದಿಂದ ಈ ಪಾದಯಾತ್ರೆ ಮಾಡುತ್ತಿಲ್ಲ. ಅಹಿಂದ ಹೆಸರಿನಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರಕಾರವು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ಭ್ರಷ್ಟ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಕ್ಕಿಳಿಸಿ, ಶೋಷಿತ ಪೀಡಿತ, ವಂಚಿತರಿಗೆ ನ್ಯಾಯ ಕೊಡಲು ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ನಮ್ಮ ಹೋರಾಟದ ಪರಿಣಾಮವಾಗಿ ದೆಹಲಿಯ ಕಾಂಗ್ರೆಸ್ಸಿನ ವರಿಷ್ಠರು ನಿನ್ನೆ ರಾಜ್ಯಕ್ಕೆ ಬಂದಿದ್ದಾರೆ. ತಪ್ಪು ಮಾಡಿದ್ದರೂ, ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಮುಖ್ಯಮಂತ್ರಿ ಪರವಾಗಿ ನಿಲ್ಲುವಂತೆ ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಯಾದಗಿರಿಯಲ್ಲಿ ದಲಿತ ಕುಟುಂಬದ ಒಬ್ಬ ಪೊಲೀಸ್ ಅಧಿಕಾರಿ ಲಂಚ ಕೊಟ್ಟರೂ ಆಡಳಿತ ಪಕ್ಷದ ಶಾಸಕರಿಂದ ಕೆಲಸ ಆಗದ ಕಾರಣ ಮೊನ್ನೆ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆಯ ಪರಿಣಾಮವಾಗಿ ಬಡವರು ಮನೆ ಕಳಕೊಂಡಿದ್ದಾರೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಮನೆ ಕಳಕೊಂಡ ಬಡವರಿಗೆ ತಕ್ಷಣ 5 ಲಕ್ಷ ಪರಿಹಾರ ಮೊತ್ತ ನೀಡಿದ್ದರು.
ಸಿದ್ದರಾಮಯ್ಯನವರ ಸರಕಾರ ಒಂದು ಲಕ್ಷವನ್ನು ಭಿಕ್ಷೆ ನೀಡುವಂತೆ ಮಾಡುತ್ತಿದೆ ಎಂದು ಟೀಕಿಸಿದರು.ಉತ್ತರ ಕನ್ನಡದಲ್ಲಿ ಮನೆ ಕಳಕೊಂಡವರಿಗೆ ಪರಿಹಾರ ನೀಡಿಲ್ಲ; ಪಕ್ಕದ ಕೇರಳದ ವಯನಾಡ್ನಲ್ಲಿ 100 ಮನೆ ಕೊಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅಲ್ಲಿ ಮನೆ ಕೊಡಲು ನಮ್ಮ ವಿರೋಧವಿಲ್ಲ. ಆದರೆ, ಮುಖ್ಯಮಂತ್ರಿಗಳಿಗೆ ಶಕ್ತಿ ನೀಡಿದ ಮೈಸೂರು ಜಿಲ್ಲೆಯಲ್ಲಿ ಲಕ್ಷಾಂತರ ಬಡವರು, ನಿರ್ಗತಿಕರು ಸಲ್ಲಿಸಿದ ನಿವೇಶನಕ್ಕೆ ಸಂಬAಧಿಸಿದ ಅರ್ಜಿಗಳು ಹಾಗೇ ಬಿದ್ದಿವೆ. ಇದರ ಬಗ್ಗೆ ಮುಖ್ಯಮಂತ್ರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ತೀವ್ರವಾಗಿದೆ. ಸಾಮಾನ್ಯ ಜನರು ಇವತ್ತು ಪರದಾಡುವಂತಾಗಿದೆ. ದುಷ್ಟ, ಭ್ರಷ್ಟ ಕಾಂಗ್ರೆಸ್ ಸರಕಾರವು ನಾಡಿನ ಜನರಿಗೆ ಮರಣಶಾಸನ ಬರೆಯುತ್ತಿದೆ. ಇದು ಎಷ್ಟು ಬೇಗ ತೊಲಗುವುದೋ ಜನರಿಗೂ ಅಷ್ಟೇ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ದಿನೇದಿನೇ ನಮ್ಮ ಹೋರಾಟಕ್ಕೆ ಜನಬೆಂಬಲ ಹೆಚ್ಚಾಗುತ್ತಿದೆ. ಈ ನಾಡಿನ ಜನರ ಪರವಾಗಿ ನಡೆಯುವ ಈ ಹೋರಾಟಕ್ಕೆ ತಮ್ಮೆಲ್ಲರ ಆಶೀರ್ವಾದ, ಬೆಂಬಲ ಇರಲಿ ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ ಬಿಜೆಪಿ- ಜೆಡಿಎಸ್ ಪಕ್ಷಗಳ ಹೋರಾಟ ಇದಾಗಿದೆ. ಯಡಿಯೂರಪ್ಪನವರು ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಹಿಂದೆ ರಾಜ್ಯದ ಜನರು ಮಾತನಾಡುತ್ತಿದ್ದರು. ಜನಪರ ಹೋರಾಟ ಮಾಡುವ ಮಾಜಿ ಪ್ರಧಾನಿ ದೇವೇಗೌಡರೂ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದು, ನಮಗೆ ಆನೆಬಲ ಬಂದಂತಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಇದ್ದರು.