ನವದೆಹಲಿ, ಆ.06(DaijiworldNews/AA): ಬಾಂಗ್ಲಾದೇಶದಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಇದರಿಂದ ದೇಶದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಮೇಘಾಲಯವು ಬಾಂಗ್ಲಾದೇಶದ ಗಡಿಯ ಬಳಿ ಕರ್ಫ್ಯೂ ವಿಧಿಸಿದೆ.
ಈ ಬಗ್ಗೆ ಮೇಘಾಲಯದ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ ಮಾಹಿತಿ ನೀಡಿ ನೆರೆಯ ದೇಶದಲ್ಲಿ ಅಶಾಂತಿಯ ನಡುವೆ ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಸುಮಾರು 444 ಕಿಮೀ ಗಡಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಈ ಕರ್ಫ್ಯೂ ಮುಂದಿನ ಸೂಚನೆ ಬರುವವರೆಗೆ ಪ್ರತಿದಿನ ಸಂಜೆ 6ರಿಂದ ಬೆಳಿಗ್ಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಿಎಸ್ಎಫ್ ಅಧಿಕಾರಿಗಳು ಮತ್ತು ಮೇಘಾಲಯ ಪೊಲೀಸರೊಂದಿಗೆ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಕರ್ಫ್ಯೂ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಕೊಳ್ಳಲಾಗಿದೆ. ಇದಲ್ಲದೆ, ಬಿಎಸ್ಎಫ್ 4,096 ಕಿಮೀ ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ತನ್ನ ಎಲ್ಲಾ ಘಟಕಗಳಿಗೆ 'ಹೈ ಅಲರ್ಟ್' ನೀಡಿದೆ.
ತೀವ್ರ ಪ್ರತಿರೋಧದಿಂದಾಗಿ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದರು. ಬಳಿಕ ಭಾರತಕ್ಕೆ ಬಂದಿದ್ದರು. ಇದೀಗ ಶೇಖ್ ಹಸೀನಾ ಅವರ ಮುಂದಿನ ಪ್ರಯಾಣಕ್ಕೆ ಅನಿರೀಕ್ಷಿತ ತಡೆಯುಂಟಾಗಿದ್ದು, ಇನ್ನೂ ಒಂದೆರಡು ದಿನ ಭಾರತದಲ್ಲೇ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.