ನವದೆಹಲಿ, ಆ.07(DaijiworldNews/AA): ಒಲಿಂಪಿಕ್ಸ್ ಸ್ಪರ್ಧೆಯಿಂದ ಕುಸ್ತಿಪಟು ವಿನೇಶಾ ಫೋಗಟ್ ಅವರನ್ನು ಅನರ್ಹಗೊಳಿಸಿರುವುದು 'ಇಡೀ ದೇಶಕ್ಕೆ ಮಾಡಿದ ಅವಮಾನ' ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕುಸ್ತಿ ಫೈನಲ್ ಸ್ಪರ್ಧೆಯಿಂದ ವಿನೇಶಾ ಫೋಗಟ್ ಅವರು ಅನರ್ಹಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ಸಿಂಗ್ ಅವರು, 'ಇದು ವಿನೇಶಾ ಫೋಗಟ್ಗಷ್ಟೇ ಅಲ್ಲ. ಇಡೀ ದೇಶಕ್ಕೆ ಆಗಿರುವ ಅವಮಾನ. ಇತಿಹಾಸ ನಿರ್ಮಿಸಲು ಹೊರಟಿದ್ದ ಫೋಗಟ್ ಅವರು, 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ಘೋಷಿಸಿರುವುದು ಮತ್ತು ಅನರ್ಹಗೊಳಿಸಿರುವುದು ಘೋರ ಅನ್ಯಾಯ' ಎಂದು ಕಿಡಿಕಾರಿದ್ದಾರೆ.
'ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಾದರೆ ಒಲಿಂಪಿಕ್ಸ್ ಅನ್ನೇ ಬಹಿಷ್ಕರಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಕುಸ್ತಿ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ ಅವರು ಹೆಚ್ಚಿನ ತೂಕ ಹೊಂದಿದ ಹಿನ್ನೆಲೆ ಫೈನಲ್ನಿಂದ ಅನರ್ಹಗೊಂಡಿದ್ದಾರೆ. ವಿನೇಶ್ ಫೋಗಟ್ ಅವರು 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಇದರಲ್ಲಿ 100 ಗ್ರಾಂ ಹೆಚ್ಚು ತೂಕ ಹೊಂದಲು ಅವಕಾಶವಿದೆ. ಆದರೆ ವಿನೇಶ್ ಅವರ ದೇಹದ ತೂಕ 150 ಗ್ರಾಂ ಹೆಚ್ಚಿದ್ದರಿಂದ, ಅವರು ಫೈನಲ್ ಸ್ಪರ್ಧೆಯಿಂದ ಅನರ್ಹಗೊಂಡಿರುವುದಾಗಿ ವರದಿಯಾಗಿದೆ.