ಬೆಂಗಳೂರು, ಆ.08(DaijiworldNews/AK):ಅಹಿಂದ ಹೆಸರು ಹೇಳಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಲವು ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.
ಐದನೇ ದಿನವಾದ ಇಂದು ಮೈಸೂರು ಚಲೋ ಪಾದಯಾತ್ರೆಯು ಮುಂದುವರೆಯಿತು. ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ನಿಗಮದ ಹಗರಣ, ಮೈಸೂರಿನ ಸಾವಿರಾರು ಕೋಟಿಯ ಮೂಡ ನಿವೇಶನ ಹಗರಣ ಇರಬಹುದು; ಇಂಥ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರಕಾರ, ಇಂಥ ಭ್ರಷ್ಟ ಮುಖ್ಯಮಂತ್ರಿಗಳಿಂದ ನಾಡಿನ ಜನತೆಗೆ ನ್ಯಾಯ ಕೊಡಲು ಸಾಧ್ಯವೇ ಎಂದು ಅವರು ಕೇಳಿದರು.
ಇಂಥ ಭ್ರಷ್ಟ ಮುಖ್ಯಮಂತ್ರಿಗಳಿಂದ ನಾಡಿನ ರೈತರ ಕಣ್ಣೀರು ಒರೆಸಲು ಸಾಧ್ಯವೇ? ಇಂಥ ಭ್ರಷ್ಟ ಮುಖ್ಯಮಂತ್ರಿಗಳಿಂದ ಈ ನಾಡಿನ ದೀನದಲಿತರಿಗೆ ನ್ಯಾಯ ದೊರಕಿಸಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಗಲುದರೋಡೆಯಲ್ಲಿ ನಿರತವಾಗಿದೆ. ವಾಲ್ಮೀಕಿ ನಿಗಮದ ದಲಿತ ಸಮುದಾಯದ ಲೆಕ್ಕಾಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕನಿಗೆ ಹಣ ಕೊಟ್ಟರೂ ವರ್ಗಾವಣೆ ಆಗದೆ ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಭಂಡ ಸರಕಾರದಿಂದ ನಾಡಿನ ಜನತೆಗೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದು ನುಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಎಸ್ಐಟಿಯನ್ನು ನಾವು ಅವತ್ತೇ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಂ ಎಂದಿದ್ದೆವು. ಪೊಲೀಸ್ ಅಧಿಕಾರಿಗಳ ನಿಯತ್ತಿನ ಬಗ್ಗೆ ನಮಗೆ ವಿಶ್ವಾಸ- ನಂಬಿಕೆ ಇದೆ. ಆದರೆ, ಭ್ರಷ್ಟ ಆಡಳಿತ ಪಕ್ಷ, ಸಿದ್ದರಾಮಯ್ಯನವರ ನಡವಳಿಕೆ ಬಗ್ಗೆ ನಮಗೆ ವಿಶ್ವಾಸ ಇಲ್ಲ. ಭ್ರಷ್ಟ ಸಿಎಂ ಕೆಳಕ್ಕಿಳಿಸಲು ರಾಜ್ಯದಲ್ಲಿ ಕೂಗು ಎದ್ದಿದೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಕ್ಕಿಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರಕಟಿಸಿದರು.
ಮಂಡ್ಯ ಜಿಲ್ಲೆಯು ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ ಎಂದು ತಿಳಿಸಿದರು. ಇವತ್ತು ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಹಾಸನ ಮೊದಲಾದ ಕಡೆಯಿಂದ ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ಲೂಟಿಗೆ ಇಳಿದುದು ನ್ಯಾಯವೇ?- ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಮುಖ್ಯಮಂತ್ರಿಯಾಗಿ ದಲಿತರ ಜಮೀನನ್ನು ನುಂಗಿದ್ದು, ಇದು ನ್ಯಾಯವೇ? ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಲೂಟಿಗೆ ಇಳಿದಿದ್ದೀರಲ್ಲವೇ ಎಂದು ಕೇಳಿದರು.
ನಿವೇಶನಗಳು 12 ಜನರಿಗೆ ನೋಂದಣಿ ಆದ ಮೇಲೆ, 10 ವರ್ಷಗಳ ಬಳಿಕ ಬಡಾವಣೆ ನಿರ್ಮಿಸಿದ ಜಮೀನು ವಾಪಸ್ ಕೊಡಿ ಎಂದು ಕೇಳಿದ್ದಾರೆ. ಇದನ್ನು ಯಾರಾದರೂ ನಂಬುತ್ತಾರಾ ಎಂದು ಪ್ರಶ್ನಿಸಿದರು. ಮೂಡ ಹಗರಣದಲ್ಲಿ ಪ್ರತಿಯೊಂದು ಹಂತದಲ್ಲೂ ಸಿದ್ದರಾಮಯ್ಯನವರ ಪಾತ್ರ ಇದೆ ಎಂದು ಟೀಕಿಸಿದರು.
14 ನಿವೇಶನಕ್ಕೆ 62 ಕೋಟಿ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 62 ಕೋಟಿ ಕೊಡೋಣ. ಆದರೆ, ನೀವು ಜಮೀನು ಎಷ್ಟಕ್ಕೆ ಕೊಂಡುಕೊAಡಿದ್ದೀರಿ ಅಣ್ಣ? 3 ಎಕರೆ 16 ಗುಂಟೆ ಜಮೀನು ಖರೀದಿಸಿದ್ದು 5 ಲಕ್ಷಕ್ಕೆ. ನೀವು ಕೇಳುವುದು 62 ಕೋಟಿ. 5 ಲಕ್ಷ ಹೂಡಿದರೆ 15-20 ವರ್ಷದಲ್ಲಿ ಒಂದು ಕೋಟಿ ಆಗುತ್ತದೆ ಎಂದುಕೊಳೋಣ. ನೀವು ಕೇಳುವುದು 62 ಕೋಟಿ ಎಂದು ಆಕ್ಷೇಪಿಸಿದರು.
ಬಿಜೆಪಿ- ಜೆಡಿಎಸ್ ಮುಖಂಡರು, ಎರಡೂ ಪಕ್ಷಗಳ ಪದಾಧಿಕಾರಿಗಳು, ಶಾಸಕರು, ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.