ವಯನಾಡು, ಆ 9(DaijiworldNews/MS): ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ವಲಯದಲ್ಲಿ ಸೇನೆ ನಿರ್ಮಿಸಿದ ಪರಿಹಾರ ಶಿಬಿರ, ಆಸ್ಪತ್ರೆ ಮತ್ತು ಬೈಲಿ ಸೇತುವೆಯ ಬಳಿ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಅವರು ವಿಪತ್ತು ವಲಯದ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಐಎಎಫ್ ಹೆಲಿಕಾಪ್ಟರ್ ಮೂಲಕ ವಯನಾಡ್ ಗೆ ತೆರಳಲಿದ್ದಾರೆ. ಪ್ರಧಾನಿ ಭೇಟಿ ಬಳಿಕ ಅವರು ವಯನಾಡ್ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಸಾಧ್ಯತೆ ಇದೆ.
ವಯನಾಡ್ ವಿಪತ್ತು ಪ್ರತಿಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ಕೇರಳ ಕ್ಯಾಬಿನೆಟ್ ಉಪಸಮಿತಿ ಮತ್ತು ಜಿಲ್ಲಾಡಳಿತವು ಪ್ರಧಾನಿ ಅವರನ್ನು ಸ್ವಾಗತಿಸಲಿದ್ದು , ಮೋದಿ ಅವರು ಬದುಕುಳಿದವರು ಮತ್ತು ಗಾಯಗೊಂಡವರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ಅದೇ ದಿನ ಸಂಜೆ 4 ಗಂಟೆಗೆ ನವದೆಹಲಿಗೆ ತೆರಳಲಿದ್ದಾರೆ.
ಗುರುವಾರ (ಆಗಸ್ಟ್ 8) ಅಡ್ವಾನ್ಸ್ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ) ತಂಡವು ವಯನಾಡ್ಗೆ ಭೇಟಿ ನೀಡಿ ಮೋದಿಯವರ ಹೆಲಿಕಾಪ್ಟರ್ಗೆ ಸುರಕ್ಷಿತ ಲ್ಯಾಂಡಿಂಗ್ ವಲಯವನ್ನು ಹುಡುಕಿತು. ಪ್ರಧಾನಿಯ ಭೇಟಿಯನ್ನು ಸುಗಮಗೊಳಿಸಲು ಕೇರಳ ಪೊಲೀಸರು ಎಸ್ಪಿಜಿಯೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಿದರು.
ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 417 ಕ್ಕೆ ತಲುಪಿದ್ದು ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.