ಬೆಂಗಳೂರು, ಆ.09(DaijiworldNews/AK): ಕಾಂಗ್ರೆಸ್ಸೇ ವಿಪಕ್ಷವಾಗಿ ಬೀದಿಗಿಳಿದು ‘ನಾನು ಕಳ್ಳ ಅಲ್ಲ; ನಾನು ಕಳ್ಳ ಅಲ್ಲ, ನನ್ನ ನಂಬಿರಿ’ ಎಂದು ಹೇಳುವುದನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ವಿಪಕ್ಷವಾಗಲು ತಯಾರಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ಮಂಡ್ಯದ ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಹಗರಣಗಳ ಸರ್ಕಾರದ ಕುರಿತು ಪುಸ್ತಕ ಬಿಡುಗಡೆ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷವು ದಾಖಲೆಗಳನ್ನು ಕೊಟ್ಟು ಸರಕಾರ ಸ್ವಚ್ಛ, ಪಾರದರ್ಶಕ ಎಂದು ವಿಧಾನಸಭೆ ಒಳಗೆ ಹೇಳಬೇಕಿತ್ತು ಎಂದು ಹೇಳಿದರು.
ಕಾಂಗ್ರೆಸ್, ವಿಪಕ್ಷವಾಗಲು ಕೆಲಸ ಮಾಡಲು ಪೀಠಿಕೆ ಹಾಕಿ ಹೊರಡುತ್ತಿದೆ ಎಂದು ಟೀಕಿಸಿದರು.ವಿಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ; ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿ ಹಾರಾಟ ಮಾಡುತ್ತಿದೆ ಎಂದು ಆಕ್ಷೇಪಿಸಿದ ಅವರು, ಮಂತ್ರಿಗಳಿಗೆ ಇನ್ ಚಾರ್ಜ್ ಕೊಟ್ಟು ಸಭೆಗಳನ್ನು ಮಾಡಿ, ನಾವು ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆ ತರುತ್ತೇವೆ; ಕೇಂದ್ರ ನೀಡುವ ಅನುದಾನದಲ್ಲಿ ತಾರತಮ್ಯ ಆಗಿದೆ. ಅದರ ಬಗ್ಗೆ ನಾವು ಸಮಾವೇಶ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ಸಿನವರು ನಾಟಕ ಆಡುತ್ತಿದ್ದಾರೆ ಎಂದು ದೂರಿದರು.
ಕೇಂದ್ರದ ಅನುದಾನ ಬಾರದಿದ್ದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ಮಾತನಾಡಬೇಕಿತ್ತು. ನಮ್ಮ ರಾಜ್ಯದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಜೀ ಯವರು ವಿಪಕ್ಷ ನಾಯಕರು; ಅವರು ತಾರತಮ್ಯ ಆಗಿದೆ ಎಂದು ಸಂಸತ್ತಿನಲ್ಲಿ ಒಂದು ದಿನವೂ ಮಾತನಾಡಿಲ್ಲ. ಇಲ್ಲಿ ರಾಜಕೀಯದ ಬೇಳೆ ಬೇಯಿಸಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪಾದಯಾತ್ರೆ ಅಂತಿಮ ಘಟ್ಟಕ್ಕೆ:
ಪಾದಯಾತ್ರೆಯ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ. ಇವತ್ತು ಸಂಜೆ ಮೈಸೂರು ಗಡಿಭಾಗ ತಲುಪಿ ನಾಳೆ ಬೆಳಿಗ್ಗೆ ಆರೇಳು ಕಿಮೀ ಪಾದಯಾತ್ರೆಯ ಬಳಿಕ ಮೈಸೂರಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಆರ್. ಅಶೋಕ್ ಅವರು ವಿವರಿಸಿದರು.
ಜನರು ನಮ್ಮನ್ನು ವಿಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಸರಕಾರ ಮಾಡುವ ತಪ್ಪುಗಳನ್ನು ಜನರ ಮುಂದಿಡುವುದು, ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅವರ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ- ಇವೆಲ್ಲವನ್ನೂ ತಿಳಿಸುವುದು, ಹೋರಾಟ ಮಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಕಾನೂನು ಪ್ರಕಾರ, ನಿಯಮ ಪ್ರಕಾರ ಸಿದ್ದರಾಮಯ್ಯನವರು ನಿವೇಶನ ಪಡೆದಿದ್ದರೆ 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು?- ಇದು ಬಿಜೆಪಿ ಪ್ರಶ್ನೆ ಎಂದರು. 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ ಎಂದು ಕೇಳಿದರು. ಅನ್ಯಾಯ ಇದ್ದ ಕಾರಣ ನೀವು ಆಗ ಸಹಿ ಹಾಕಿಲ್ಲ ಅಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಈ ಆಪಾದನೆಗೆ ಅವರಲ್ಲಿ ಉತ್ತರ ಇಲ್ಲ ಎಂದು ತಿಳಿಸಿದರು.
ಅಣ್ಣ ಡಿ.ಕೆ.ಶಿವಕುಮಾರಣ್ಣ, ಸಿದ್ರಾಮಣ್ಣ, ನೀವು ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ ಮಾಡಿದ್ದೀರಿ. 25 ಸಾವಿರ ಕೋಟಿ ಟಿಎಸ್ಪಿ ದಲಿತರ ಉದ್ಧಾರಕ್ಕೆ ಸೇರಬೇಕಾದ ಹಣವನ್ನು ಗ್ಯಾರಂಟಿ ಕೊಡಲು ಬಳಸಿದ್ದೀರಿ. ಇದಕ್ಕೆ ದಲಿತರ ಹಣವೇ ಇವರಿಗೆ ಬೇಕಾಗಿತ್ತು. ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದೇವೆ ಎಂದು ಗಮನ ಸೆಳೆದರು.