ತಿರುವನಂತಪುರಂ, ಆ.09(DaijiworldNews/AK): ಭೂಕುಸಿತದ ಭಯಾನಕವನ್ನು ಅನುಭವಿಸಿದ ವಯನಾಡಿಗೆ ಈಗ ಭೂಕಂಪದ ಭೀತಿ ಎದುರಾಗಿದೆ. ಇಂದು ಬೆಳಗ್ಗೆ 10:15ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ ,ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದು ಕೇಳಿಸಿತು ಎನ್ನಲಾಗಿದೆ.
ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಶಬ್ದ ಕೇಳಿ ಅಂಬಲವಾಯಲ್-ಎಡಕಲ್ ಭಾಗದ ಜನರು ಮನೆಯಿಂದ ಹೊರ ಬಂದರು.
ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ. ಹಲವರಿಗೆ ತಮ್ಮ ಮನೆಯ ಕಿಟಕಿ ಗಾಜುಗಳು ಅಲುಗಾಡಿರುವ ಅನುಭವವಾಗಿದೆ. ಭೂಕುಸಿತದ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ಈಗಾಗಲೇ ವಯನಾಡು ಪ್ರದೇಶಕ್ಕೆ ಭೇಟಿ ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.