ಬೆಂಗಳೂರು, ಆ.08(DaijiworldNews/AK): ಸಿದ್ದರಾಮಯ್ಯನವರು ತಾವು ಕ್ಲೀನ್ ಎಂದು ತೋರಿಸಿಕೊಳ್ಳಲು 14 ಸೈಟ್ಗಳನ್ನು ಸರಕಾರಕ್ಕೆ ಕೊಡಬೇಕು. ಅವರು ಶೇ 50-50 ದಾರಿ ತೋರಿಸಿದ ಬಳಿಕ ಸುಮಾರು 400- 500 ನಿವೇಶನಗಳನ್ನು ಬೇರೆಯವರು ಮಂಜೂರು ಮಾಡಿಸಿಕೊಂಡಿದ್ದಾರೆ. ಇಷ್ಟನ್ನೂ ವಾಪಸ್ ಮೂಡಕ್ಕೆ ಕೊಡಬೇಕು. ಇವಿಷ್ಟನ್ನೂ ಸಿಬಿಐ ತನಿಖೆಗೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದರು.
ಮೈಸೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮೂಡದಲ್ಲಿ ನಿವೇಶನಕ್ಕಾಗಿ ಅರ್ಜಿ ಹಾಕಿದ 86 ಸಾವಿರ ಮಧ್ಯಮ ವರ್ಗ, ಬಡವರಲ್ಲಿ ಅರ್ಹರಿಗೆ ನಿವೇಶನ ಕೊಡಬೇಕು. ಈ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಗೇ ಹೋರಾಟ ನಿಲ್ಲುವುದಿಲ್ಲ. ರಾಜಭವನಕ್ಕೆ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಕರೆದುಕೊಂಡು ಹೋಗಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ಸಿಬಿಐ ತನಿಖೆ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಕೋರಿದ್ದೇವೆ. ಈಗ ರಾಜಭವನದಿಂದ ನೋಟಿಸ್ ಕೂಡ ಕೊಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯನವರು ದೊಡ್ಡ ಉತ್ತರ ಕೊಟ್ಟಿದ್ದಾಗಿ ಪತ್ರಿಕೆಗಳಲ್ಲಿ ಓದಿದ್ದೇನೆ ಎಂದು ವಿವರಿಸಿದರು.
60 ಪುಟದ ಉತ್ತರವಾದರೂ ಕೊಡಲಿ; 120 ಪುಟದ್ದಾದರೂ ಇರಲಿ. ಗವರ್ನರ್ ನೋಟಿಸ್ ಕೊಟ್ಟಿದ್ದಕ್ಕೇ ಇಷ್ಟು ಭಯ ಬಿದ್ದಿದ್ದೀರಲ್ಲವೇ? ಅನುಮತಿ ಕೊಟ್ಟರೆ ನಿಮ್ಮ ಕಥೆ ಏನು ಎಂದು ಪ್ರಶ್ನಿಸಿದರು. ಈಗಾಗಲೇ ನಾವು ಎಲ್ಲೆಲ್ಲಿ ಹೋಗುತ್ತೇವೋ ಅಲ್ಲೆಲ್ಲ ಕ್ಲಿಯರೆನ್ಸ್ ಮಾಡುತ್ತ ಹೋಗುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಡಿಕೆಶಿ ಹೃದಯದಲ್ಲಿ ಒಂದು, ತೋರಿಕೆಗೆ ಇನ್ನೊಂದು..
ಪಾದಯಾತ್ರೆಗೆ ಇಷ್ಟೊಂದು ಕ್ಲಿಯರೆನ್ಸ್ ಕೊಡುವುದಾದರೆ ಡಿ.ಕೆ.ಶಿವಕುಮಾರ್ಗೆ ಹೃದಯದಲ್ಲಿ ಒಂದು ಇರಬೇಕು. ತೋರಿಕೆಗೆ ಇನ್ನೊಂದು ಇರಬೇಕು. ಹೃದಯದಲ್ಲಿ ಸಿದ್ದರಾಮಯ್ಯ ಬೇಗ ಕುರ್ಚಿ ಖಾಲಿ ಮಾಡಲೆಂದು ಇರಬೇಕು. ಮೇಲ್ಗಡೆ ಸಿದ್ದರಾಮಯ್ಯನವರ ಜೊತೆ ಬಂಡೆಯ ಥರ ನಿಂತುಕೊಳ್ಳುವುದಾಗಿ ಹೇಳುತ್ತಿರಬೇಕು ಎಂದು ತಿಳಿಸಿದರು.ಹೊರಗಡೆ ಬಂಡೆ, ಅಂತರಾತ್ಮದಲ್ಲಿ ಇನ್ನೊಂದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಆದರೆ ಆಗುತ್ತಿ; ಇಲ್ಲವಾದರೆ ಇಲ್ಲ ಎಂದು ಅಜ್ಜಯ್ಯ ಹೇಳಿದ್ದಾರಂತೆ; ಯೋಗ ಬಂದಿದ್ದಾಗಿ ಶಿವಕುಮಾರ್ ಅವರು ಮಾಧ್ಯಮಗಳಿಗೂ ಹೇಳಿದ್ದಾರೆ. ಯಾರೋ ಜ್ಯೋತಿಷಿಗಳೂ ಹೇಳಿದ್ದಾರಂತೆ ಎಂದು ವಿವರಿಸಿದರು. ಡಿ.ಕೆ.ಶಿವಕುಮಾರ್ ಅವರ ಸ್ಟಾಂಡರ್ಡ್ ಒಳಗೊಂದು, ಹೊರಗೊಂದು ಎಂದು ಇದರಿಂದ ಗೊತ್ತಾಗುತ್ತದೆ ಎಂದರು.