ಬೆಂಗಳೂರು, ಆ.10(DaijiworldNews/AA): ಮುಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ, ಕಾನೂನು ಹೋರಾಟ ನಡೆಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮುಡಾ ಹಗರಣದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟ ಪ್ರಾರಂಭವಾದ ಬಳಿಕ ಮುಂದಿನ ಬೆಳವಣಿಗೆ ಏನೆಂಬುದನ್ನು ಗಮನಿಸಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿರ್ಧರಿಸಲಾಗುವುದು. ಹತ್ತಾರು ಪ್ರಕರಣಗಳು ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿವೆ. ಯಾವುದಕ್ಕೂ ಕೂಡ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಮುಂದಾಗಿಲ್ಲ. ಮೂಡಾ ವಿಚಾರದಲ್ಲಿ ತುರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ಜುಲೈ 26ರಂದು ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ಮನವಿ ನೀಡುತ್ತಾರೆ. ಅದೇ ದಿನ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಮುಖ್ಯ ಕಾರ್ಯದರ್ಶಿಯವರು ಹೋಗಿ ಸ್ಪಷ್ಟನೆ ನೀಡಿ ಬಂದಿದ್ದಾರೆ. ಅದೇ ದಿನ ಸಂಜೆ ಸಿಎಂ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ರಾಜ್ಯಪಾಲರು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಸಾಮಾನ್ಯ ರಾಜಕಾರಣಿಯೋ ಅಥವಾ ಅಧಿಕಾರಿಯೋ ಅಲ್ಲ. ಸಂವಿಧಾನದ ಮುಖ್ಯಸ್ಥರಾಗಿದ್ದಾರೆ. ಅನೇಕ ಪ್ರಕರಣಗಳು ಅವರ ಕಚೇರಿಯಲ್ಲಿ ಬಾಕಿ ಉಳಿದು, ಯಾವುದಕ್ಕೂ ಗಮನ ಹರಿಸದೇ ಏಕಾಏಕಿ ಸಿಎಂ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.