ಮಂಡ್ಯ, ಆ.11(DaijiworldNews/AA): ಸಾಫ್ಟ್ ಲಾಕ್ ಗೇಟ್ ಅಳವಡಿಸದ ಹಿನ್ನೆಲೆ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಮುರಿದು ಹೋಗಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 70 ವರ್ಷಗಳ ಹಿಂದೆ ಟಿಬಿ ಡ್ಯಾಂ ನಿರ್ಮಾಣವಾಗಿದೆ. ಆದರೆ ಡ್ಯಾಂಗೆ ಸಾಫ್ಟ್ ಲಾಕ್ ಗೇಟ್ ಅಳವಡಿಸಿದ ಹಿನ್ನೆಲೆಯಲ್ಲಿ ಹೀಗೆ ಆಗಿದೆ. ಆಲಮಟ್ಟಿ, ನಾರಾಯಣಪುರ ಡ್ಯಾಂಗೆ ಸಾಫ್ಟ್ ಲಾಕ್ ಗೇಟ್ ಅಳವಡಿಸಲಾಗಿದೆ. ಅದೇ ರೀತಿ ತುಂಗಾಭದ್ರ ಡ್ಯಾಂಗೆ ಸಾಫ್ಟ್ ಲಾಕ್ ಗೇಟ್ ಅಳವಡಿಸಬೇಕು. ಇದರಿಂದ ಮುಂದೆ ಇಂತಹ ಅವಘಡಗಳನ್ನು ತಡೆಯಲು ಸಾಧ್ಯವಾಗುತ್ತೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. ಓಪನ್ ಆಗಿ 30 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಈ ಅನಾಹುತದಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ.70 ವರ್ಷಗಳ ಹಿಂದೆ ಈ ಜಲಾಶಯ ಕಟ್ಟಿದ್ದಾರೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು ಎಂದು ಹೇಳಿದರು.
ತುಂಗಭದ್ರಾ ಡ್ಯಾಂಗೆ ಸಾಫ್ಟ್ ಲಾಕ್ ಗೇಟ್ ಇಲ್ಲದ ಕಾರಣ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. ಇದರಿಂದ ರೈತರ ವಿಚಾರದಲ್ಲಿ ಚಲ್ಲಾಟವಾಡಿದ ಹಾಗೆ ಆಗಿದೆ. ತುಂಗಭದ್ರಾ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.