ಮೈಸೂರು, ಆ 13 (DaijiworldNews/TA) : ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ಧಿ ವಿಚಾರವಾಗಿ ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿ ಆರಂಭವಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರ ಪ್ರಾಧಿಕಾರ ರಚನೆ ಮಾಡಿದ್ರೆ, ರಾಜಮನೆತನ ಕೋರ್ಟ್ ಮೆಟ್ಟಿಲೇರಿ ಇದಕ್ಕೆ ತಡೆಯಾಜ್ಞೆ ತಂದಿದೆ.
ಈ ಬಗ್ಗೆ ಸುದ್ದಿಘೋಷ್ಠಿ ನಡೆಸಿ ಹೇಳಿಕೆ ನೀಡಿದ ಪ್ರಮೋದಾ ದೇವಿ ಒಡೆಯರ್ ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ವಿರೋಧ ಇದೆ. ಪ್ರಕರಣ ಕೋರ್ಟ್ನಲ್ಲಿ ಇರುವಾಗ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ ಎಂಬುವುದಾಗಿ ಹೇಳಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗರೆಡ್ಡಿ ಯಾವ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೋ ಅಂತಹ ದೇಗುಲದಲ್ಲಿ ಪ್ರಾಧಿಕಾರ ಮಾಡಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಕೋರ್ಟ್ ನಲ್ಲಿ ಕೇಸ್ ಇದೆ, ಏನು ತೀರ್ಮಾನ ಆಗುವುದೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ನಾವು ಕಾನೂನು ಮಾಡಿದ್ದೇವೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಏನ್ ಮಾಡಬೇಕು ಅಂತ ಮುಂದಿನ ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಈ ಎಲ್ಲಾ ಹೇಳಿಕೆಗಳು ಸಧ್ಯ ರಾಜಮನೆತನ ಮತ್ತು ಸರ್ಕಾರದ ನಡುವಿನ ಜಟಾಪಟಿಯನ್ನು ಸ್ಪಷ್ಟಪಡಿಸುತ್ತಿದೆ.