ಕೊಪ್ಪಳ, ಆ.13(DaijiworldNews/AA): ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾಗಿ ನೀರು ಪೋಲಾಗುತ್ತಿದ್ದು, ಈ ಹಿನ್ನೆಲೆ ಇಂದು ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಂ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.
19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆ ಕಾರ್ಯ ಇಂದು ಸಂಜೆಯಿಂದ ಆರಂಭವಾಗಲಿದ್ದು, ಜಲಾಯಶಯದ ನೀರು ಇನ್ನಷ್ಟು ಪೋಲಾಗುವ ಮೊದಲೇ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ಯತ್ನಿಸಲಾಗುತ್ತಿದೆ. ನೀರಿನಲ್ಲೇ ಗೇಟ್ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ ಎಂದು ತಿಳಿದುಬಂದಿದೆ.
ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದ್ದು, ತಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ತಾತ್ಕಾಲಿಕ ಗೇಟ್ ಅಳವಡಿಸಿದರೆ ಅಪಾರ ಪ್ರಮಾಣದ ನೀರು ಡ್ಯಾಂನಲ್ಲೇ ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ಡ್ಯಾಂ ಮಂಡಳಿ ನಿರ್ಧರಿಸಿದೆ.
ಇನ್ನು ಗೇಟ್ ತುಂಡಾದ ಎರಡು ದಿನಗಳಲ್ಲಿ 14 ಟಿಎಂಸಿ ನೀರು ಡ್ಯಾಂನಿಂದ ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ 10ರಂದು ಡ್ಯಾಂನಲ್ಲಿ 105 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಇದೀಗ ಡ್ಯಾಂನಲ್ಲಿ 91.979 ಟಿಎಂಸಿ ನೀರು ಸಂಗ್ರಹವಾಗಿದೆ.