ನವದೆಹಲಿ, ಆ 13 (DaijiworldNews/TA) : ದೇಶದೆಲ್ಲೆಡೆ ೭೮ರ ಸ್ವಾತಂತ್ಯ್ರೋತ್ಸವ ಸಂಭ್ರಮಕ್ಕೆ ಅದ್ದೂರಿಯಿಂದಲೇ ತಯಾರಿ ನಡೆಯುತ್ತಿದೆ. ದೇಶದ ಮೂಲೆ ಮೂಲೆಗಳಲ್ಲೂ ಭಾವಪೂರ್ವಕವಾಗಿ ಆಚರಿಸುವಂತಹ ದೇಶದ ಸಂಭ್ರಮದ ಹಬ್ಬದಲ್ಲಿ ರಾಷ್ಟ್ಷಕ್ಕಾಗಿ ಪ್ರಾಣತೆತ್ತ ಮಹಾನಾಯಕರನ್ನು ಮನದಾಳದಿ ಸ್ಮರಿಸಿ, ಅವರ ತ್ಯಾಗ ಬಲಿದಾನವನ್ನೊಮ್ಮೆ ಗೌರವಿಸಿ, ಬಾನೆತ್ತರಕ್ಕೆ ಬಾವುಟ ಹಾರಿಸಿ ಹರ್ಷಪಡುವ ಈ ಹರ್ಷೋದ್ಘಾರಕ್ಕೆ, ಸ್ವಾತಂತ್ಯ್ರೋತ್ಸದ ಐತಿಹ್ಯ ಸಾರುವ ಸ್ಮಾರಕಗಳು ಭಾರತದ ಶ್ರೀಮಂತಿಕೆಗೆ ಸಾಕ್ಷಿ. ಅಂತಹ ಸ್ಮಾರಕಗಳ ಒಂದಷ್ಟು ಪರಿಚಯ ಇಲ್ಲಿದೆ.
1. ಕೆಂಪುಕೋಟೆ
ರಾಜಧಾನಿಯಲ್ಲಿ ರಾರಾಜಿಸುತ್ತಿರುವ ವಿಶ್ವ ಪರಂಪರೆಯ ತಾಣವಿದು. ಹೌದು ದೇಶದ ರಾಜಧಾನಿ ದೆಹಲಿಯಲ್ಲಿ ಕೆಂಪು ಮರಳುಗಲ್ಲಿನಿಂದ ಕಂಗೊಳಿಸುತ್ತಿರುವ, ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿರುವ ಕೆಂಪುಕೋಟೆ ಭಾರತೀಯ ಪ್ರವಾಸಿ ತಾಣಗಳ ಶ್ರೀಮಂತಿಕೆಯ ಒಂದು ಪ್ರತೀಕ. ಇದು ದೆಹಲಿಯ ಅತಿದೊಡ್ಡ ಸ್ಮಾರಕಗಳಲ್ಲಿ ಒಂದಾಗಿದೆ. ಕೆಂಪು ಕೋಟೆಯು ಭಾರತದ ಪ್ರಧಾನ ಮಂತ್ರಿಯ ರಾಷ್ಟ್ರಧ್ವಜಾರೋಹಣ ಮತ್ತು ಭಾಷಣಕ್ಕೆ ಸಾಕ್ಷಿಯಾಗು ಭವ್ಯ ದೇಶಪ್ರೇಮದ ಭಂಡಾರ ಕೂಡಾ ಇದಾಗಿದೆ.
ಭಾರತಕ್ಕೆ ಸ್ವಾತಂತ್ಯ್ರ ಸಿಗೋವರೆಗೂ ಬ್ರಿಟಿಷರು ಇಲ್ಲಿನ ಸಂಪತ್ತನ್ನು ಲೂಟಿ ಮಾಡುತ್ತಾ, ಅರಮನೆಯನ್ನು ಕೆಡವುತ್ತಾ ತಮ್ಮ ಸ್ವ-ಯತ್ತತೆ ಪ್ರದರ್ಶಿಸುತ್ತಿದ್ದರು. ಸ್ವಾತಂತ್ಯ್ರ ನಂತರ ಮೊದಲ ಧ್ವಜಾರೋಹಣವನ್ನು ಇಲ್ಲಿಯೇ ನಡೆಸುವ ಮೂಲಕ ಭಾರತ ಸರ್ಕಾರ ಕೆಂಪುಕೋಟೆಯನ್ನು ತನ್ನ ವಶಕ್ಕೆ ಪಡೆಯಿತು.
ಭಾರತದ ಈ ಬೃಹತ್ ಕೋಟೆಯನ್ನು ಮೊಘಲ್ ಚಕ್ರವರ್ತಿ ಷಹಜಹಾನ್ 1639 ರಲ್ಲಿ ನಿರ್ಮಿಸಿದನು ಎಂಬುದು ಐತಿಹ್ಯ. ಪ್ರಪಂಚದ ಅನೇಕ ಭಾಗಗಳಿಂದ ಇತಿಹಾಸ ಪ್ರೇಮಿಗಳು ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡುತ್ತಾರೆ.
2. ಕಾರ್ಗಿಲ್ ಯುದ್ಧ ಸ್ಮಾರಕ
ಕಾರ್ಗಿಲ್ ಯುದ್ದ ಮರೆತೂ ಮರೆಯಲಾಗದ ಯುದ್ಧವಿದು. ಎಲ್ಲರಿಗೂ ತಿಳಿದಿರುವಂತೆ ಕಾರ್ಗಿಲ್ ಯುದ್ಧ ಸ್ಮಾರಕ ಪಾಕ್ ಹಾಗು ಭಾರತದ ನಡುವಿನ ಸಂಘರ್ಷದ ಕರಾಳ ಚಿತ್ರಣವನ್ನು ಪ್ರತಿಬಿಂಬಿಸುವ, ನಮ್ಮ ದೇಶದ ಹುತಾತ್ಮರಿಗಾಗಿ ನಿರ್ಮಿಸಲಾದ ಒಂದು ಧ್ಯೋತಕ.
ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದ ಹುತಾತ್ಮರ ಗೌರವಾರ್ಥವಾಗಿ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕದ ಮಧ್ಯದಲ್ಲಿರುವ ಮರಳುಗಲ್ಲಿನ ಗೋಡೆಯ ಮೇಲೆ ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಭಾರತೀಯ ಸೇನೆಯ ಎಲ್ಲಾ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಇದೊಂದು ಹುತಾತ್ಮರಿಗಾಗಿ ಗೌರವ ನೀಡುವಂತಹ ಇತಿಹಾಸ ಸ್ಮಾರಕವಾಗಿದೆ.
3. ಇಂಡಿಯಾ ಗೇಟ್
ದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪ್ರವಾಸಿಗಳನ್ನು ತನ್ನತ್ತ ಸೆಳೆಯುವ ಒಂದು ಪ್ರವಾಸಿ ತಾಣವೂ ಹೌದು. ಇಂಡಿಯಾ ಗೇಟ್ ಅನ್ನು ಮೊದಲ ವಿಶ್ವ ಯುದ್ಧ ಮತ್ತು ಆಂಗ್ಲೋ-ಆಫ್ಘಾನ್ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 82,000 ಭಾರತೀಯ ಸೇನಾ ಸೈನಿಕರ ಗೌರವಾರ್ಥವಾಗಿ ನಿರ್ಮಿಸಲಾಗಿದೆ ಎಂಬುವುದು ಐತಿಹ್ಯ.
ಇದರ ಗೋಡೆಗಳ ಮೇಲೆ ಈ ವೀರ ಹುತಾತ್ಮರ ಹೆಸರುಗಳನ್ನು ಕೆತ್ತಲಾಗಿದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲು 1971 ರಲ್ಲಿ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸಲಾಯಿತು ಎಂಬುವುದು ಉಲ್ಲೇಖ.
4. ಜಲಿಯನ್ ವಾಲಾಬಾಗ್
ಜಲಿಯನ್ ವಾಲಾ ಬಾಗ್ ಸ್ವಾತಂತ್ಯ್ರ ಸಂಗ್ರಾಮದ ಸಮಯದಲ್ಲಿ ನಡೆದ ಮಾರಣಹೋಮಕ್ಕೆ ಮತ್ತೊಂದು ಸಾಕ್ಷಿ ಇದು. 1919 ರ ಏಪ್ರಿಲ್ 13 ರಂದು ಸಾವಿರಾರು ಅಹಿಂಸಾತ್ಮಕ ಪ್ರತಿಭಟನಾಕಾರರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿರುವ ಸ್ಮಾರಕ ಅನೇಕರ ಬಲಿದಾನದ ಪ್ರತೀಕ. ಪ್ರಾಣತ್ಯಾಗ ಮಾಡಿದ ವೀರ ಜನರ ಗೌರವಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ ಎಂಬುವುದಾಗಿ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
5. ಝಾನ್ಸಿ ಕೋಟೆ
ಝಾನ್ಸಿ ಕಾ ಕಿಲಾ ಎಂದು ಕರೆಯಲಾಗುವ ಝಾನ್ಸಿ ಕೋಟೆ ಕೂಡಾ ಭಾರತೀಯ ಭವ್ಯ ಪರಂಪರೆಯ ಒಂದು ಪ್ರತೀಕ. ಉತ್ತರ ಪ್ರದೇಶದಲ್ಲಿನ ಈ ಕೋಟೆಯು ಚಾಂಡೇಲಾ ರಾಜರ ಭದ್ರವಾದ ಕೋಟೆಯಾಗಿ ಕಾರ್ಯನಿರ್ವಹಿಸಿತು ಎಂಬುವುದು ಕೂಡಾ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. 1857 ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಾಂಕೇತಿಕ ಸ್ಮಾರಕ ಕೂಡಾ ಇದಾಗಿದೆ. ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರನ್ನು ಈ ಕೋಟೆಯ ಐತಿಹ್ಯ ಸಾರುವಾಗ ಸ್ಮರಿಸಲೇಬೇಕು. ವೀರವಣಿತೆಯ ಸಾಹಸದ ಪ್ರತೀಕ ಕೂಡಾ ಇದಾಗಿದೆ. ಇಂದು ಭಾರತದ ಮೊದಲ ಸ್ವಾತಂತ್ರ್ಯದ ಯುದ್ಧದ ಕಥೆಯನ್ನು ನಿರೂಪಿಸುವಂತಹ ಪ್ರಮುಖ ಸ್ಮಾರಕ ಕೂಡಾ ಇದಾಗಿದೆ.