ಹುಬ್ಬಳ್ಳಿ, ಆ.13(DaijiworldNews/AA): ಜಲಾಶಯಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಮದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ತುಂಡಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ. ಬೇಸಿಗೆಯಲ್ಲಿ ಜಲಾಶಯ ಖಾಲಿ ಇದ್ದಾಗಲೆ ನಿರ್ವಹಣೆ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಉದಾಸೀನ ತೋರಿದೆ. ಈಗದರ ಪರಿಣಾಮ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಕಳೆದ ಆರು ತಿಂಗಳ ಕಾಲ ಜಲಾಶಯ ಖಾಲಿ ಆಗಿತ್ತು. ರಾಜ್ಯ ಸರ್ಕಾರ ಆಗಲೇ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿತ್ತು. ಆದರೆ ಅದನ್ನ ಮಾಡಲಿಲ್ಲ. ಕೇಂದ್ರ ಸರ್ಕಾರ ನೀಡಿದ ಸಲಹೆಗಳನ್ನೂ ಪಾಲಿಸದೇ ಧಿಕ್ಕರಿಸಿದೆ. ಸರ್ಕಾರ ಮತ್ತು ನಿರ್ವಹಣೆ ಹೊಣೆ ಹೊತ್ತವರ ತೀವ್ರ ನಿರ್ಲಕ್ಷ ತೋರಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಬೇಕಾಬಿಟ್ಟಿ ಆಡಳಿತ, ಭ್ರಷ್ಟಾಚಾರದ ಫಲವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ. ರಾಜ್ಯ ಸರ್ಕಾರದ ಬಳಿ ರಸ್ತೆ ರಿಪೇರಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ? ರಾಜ್ಯ ಸರ್ಕಾರ ಇನ್ನಾದರೂ ತುಂಗಭದ್ರಾ ಡ್ಯಾಂ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳ ನಿರ್ವಹಣೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.