ಬೆಂಗಳೂರು, ಆ.13(DaijiworldNews/AK):ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಹೊಸದಲ್ಲ; ಅಲ್ಲಿ ರಾಜಕೀಯ ಅಸ್ಥಿರತೆ, ಹುನ್ನಾರಗಳು ಆರಂಭವಾದ ಸಂದರ್ಭದಲ್ಲಿ ಹಿಂದೂಗಳ ಕುಟುಂಬವನ್ನು ಗುರಿ ಮಾಡಿ ದೌರ್ಜನ್ಯ ಮಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ನುಗ್ಗಿ ಅತ್ಯಾಚಾರ ಮಾಡುತ್ತಿದ್ದಾರೆ. ತಾಯಿಯ ಎದುರೇ ಮಗಳ ರೇಪ್, ತಂದೆ ಎದುರುಗಡೆ ಮಗನ ಹತ್ಯೆಯಂಥ ದುರ್ಘಟನೆ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳಿಗೆ ಹಾನಿ ಎಸಗಲಾಗುತ್ತಿದೆ ಎಂದು ವಿವರಿಸಿದರು.
ಇದೊಂದು ಕೆಟ್ಟ ಸಂಪ್ರದಾಯ ಮತ್ತು ಕೆಟ್ಟ ಚಾಳಿ ಎಂದು ಆಕ್ಷೇಪಿಸಿದರು.ಜಗತ್ತಿನ ಇತರ ಕಡೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದಂಥ ಘಟನೆ ಆದಾಗ ಈ ದೇಶದಲ್ಲಿ ಇರುವ ಎಡಚರರು ಮತ್ತು ಇಂಡಿ ಒಕ್ಕೂಟದ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಸೇರಿ ಕೆಲವು ಸದಸ್ಯರು ಉಲ್ಲೇಖಿಸಿ, ಟೀಕೆ ಮಾಡಿ ರಕ್ಷಣೆಯ ಮಾತನಾಡುತ್ತಾರೆ. ಆದರೆ, ಈ ದೌರ್ಜನ್ಯದ ಬಗ್ಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿದ್ದರಾಮಯ್ಯ ಮತ್ತಿತರರು ಮಾತನಾಡುತ್ತಿಲ್ಲ. ರಾಜಕೀಯ ಅರಾಜಕತೆಯನ್ನು ಖಂಡಿಸುತ್ತಿಲ್ಲ ಎಂದು ಟೀಕಿಸಿದರು.
ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಭಾರತದಲ್ಲೂ ಇಂಥ ಘಟನೆ ಆಗಬಹುದೆಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಇದಲ್ಲದೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಗಳು ರುಬಿಯ ಮುಫ್ತಿ ಅವರು ಕೂಡ ಇದೇ ಮಾದರಿಯ ಟ್ವೀಟ್ ಮಾಡಿದ್ದಾರೆ. ಇದು ಕೂಡ ಖಂಡನೀಯ ಎಂದರು.
ದೇಶದಲ್ಲಿ ಇಂಥ ಅರಾಜಕತೆಗೆ ಹುನ್ನಾರ ಆಗಿದೆಯೇ? ಈ ನಾಯಕರಿಗೆ ಇವೆಲ್ಲವೂ ಗೊತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಬಾಂಗ್ಲಾ ವಿಮೋಚನೆ ಆದಾಗ ಶೇ 30ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ 7.9ಕ್ಕೆ ಬಂದಿದೆ ಎಂದು ವಿವರಿಸಿದರು.
ತುಂಗಭದ್ರಾ ಡ್ಯಾಮಿನಲ್ಲಿ ಆದ ದುರ್ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಸುಮಾರು 25 ಲಕ್ಷ ರೈತರಿಗೆ ಅದು ಜೀವನಾಡಿಯಾಗಿದೆ. ರೈತರ ಪರಿಸ್ಥಿತಿ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್, ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು. ಇದು ಬೇಜವಾಬ್ದಾರಿ ಕ್ರಮ ಎಂದರು.