ನವದೆಹಲಿ, ಆ.13(DaijiworldNews/AK): ಈ ತಿಂಗಳು ಕಾವೇರಿಯಿಂದ ತಮಿಳುನಾಡಿಗೆ 153.802 ಟಿಎಂಸಿ ನೀರು ಹರಿಸಲಾಗಿದ್ದು, ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿದೆ.
ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿರುವ ರಾಜ್ಯದ ಪರ ಅಧಿಕಾರಿಗಳು ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಹೆಚ್ಚುವರಿ ನೀರಿನ ಹರಿವಿನ ಲೆಕ್ಕವನ್ನು ಪರಿಗಣಿಸಬೇಕು ಎಂದು ಕರ್ನಾಟಕ ಒತ್ತಾಯಿಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಪರ ಅಧಿಕಾರಿಗಳು, ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರಿನ ಪ್ರಮಾಣವಾಗಿರುತ್ತದೆ. ಈ ಬಾರಿಯೂ ಸಹ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿರುತ್ತದೆ ಎಂದರು.
ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಒಂದು ವಾರದಲ್ಲಿ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ ಅದನ್ನು ಮುಂಬರುವ ವಾರಗಳಲ್ಲಿ ಹರಿಸತಕ್ಕದ್ದು. ಆದ್ದರಿಂದ, ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ಭರ್ತಿ ಆಗುವವರೆಗೆ ನಿರೀಕ್ಷಿಸಿ ಹೆಚ್ಚುವರಿ ನೀರನ್ನು ಹರಿಸಲು ಕಾಯುವ ಹಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.