ಬೆಂಗಳೂರು, ಆ.13(DaijiworldNews/AK): ಹೆಚ್ಎಂಟಿ ಜಾಗವನ್ನುಅರಣ್ಯ ಭೂಮಿ ಎಂದು ಪರಿಗಣಿಸಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಹೆಚ್ಎಂಟಿ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಈಶ್ವರ್ ಖಂಡ್ರೆ ವಿರುದ್ದ ಕಿಡಿಕಾರಿದರು.
ಹೆಚ್ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಎಂಟಿಗೆ ಸೇರಿದ ಸುಮಾರು 590 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದ ಸುಮಾರು 290 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಅರಣ್ಯ ಇಲಾಖೆಯ ಜಾಗ ಎಂದು ವಶಪಡಿಸಿಕೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ನನ್ನ ಮೇಲಿನ ದ್ವೇಷಕ್ಕೆ ಹೀಗೆ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಹೆಚ್ಎಂಟಿಗೆ ಈ ಜಮೀನನ್ನು ಸರ್ಕಾರ ಪುಕ್ಕಟ್ಟೆಯಾಗಿ ಕೊಟ್ಟಿಲ್ಲ ಇದಕ್ಕೆ ಹಣ ಪಡೆದಿದೆ. ಇದಲ್ಲದೆ ಅರಣ್ಯ ಇಲಾಖೆ ಕೂಡಾ ಹಿಂದೆ ಜಮೀನು ಖರೀದಿಗೆ ಒಪ್ಪಿಗೆ ಕೊಟ್ಟಿತ್ತು. ಈಗ ಯಾಕೆ ಏಕಾಏಕಿಯಾಗಿ ಖಾಲಿ ಜಾಗ ವಶಪಡಿಸಿಕೊಳ್ಳಲು ಮುಂದಾಗಿದ್ದೀರಿ? ಯಾರಿಗೆ ಹಂಚಲು ಈ ಆದೇಶ ಮಾಡಿದ್ದೀರಾ ಅಂತ ಈಶ್ವರ್ ಖಂಡ್ರೆಗೆ ಪ್ರಶ್ನೆ ಮಾಡಿದರು.