ಹೊಸಪೇಟೆ, ಆ 14(DaijiworldNews/MS): ವಿಜಯನಗರ ಜಿಲ್ಲೆಯ ಹೊಸಪೇಟೆ ಹತ್ತಿರದ ತುಂಗಭದ್ರಾ ಜಲಾಶಯದ ಗೇಟ್ ನಂಬರ್ ೧೯ರ ಚೈನ್ ಲಿಂಕ್ ಮುರಿದ ಹಿನ್ನೆಲೆಯಲ್ಲಿ ಇಂದು ತಾತ್ಕಾಲಿಕ ತಡೆ ಗೇಟ್ ಅಳವಡಿಕೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜಲಾಶಯದಲ್ಲಿ ಪ್ರಸಕ್ತ 92 ಟಿಎಂಸಿ ನೀರಿನ ಸಂಗ್ರಹವಿದೆ. ರೈತರ ಹಿತದೃಷ್ಟಿಯಿಂದ ಈ ನೀರನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸದ್ಯಕ್ಕೆ ತಾತ್ಕಾಲಿಕ ತಡೆ ಗೇಟ್ ಅನ್ನು ಇನ್ನು ಎರಡು-ಮೂರು ದಿನಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಸಚಿವರು ಜಲಾಶಯದ ತಾಂತ್ರಿಕ ತಜ್ಞ ಕನ್ನಯ್ಯ ನಾಯ್ಡು ಅವರ ಜತೆ ಚರ್ಚಿಸಿದರು. ಎರಡು ದಿನಗಳಲ್ಲಿ ಗೇಟ್ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಕನ್ನಯ್ಯ ನಾಯ್ಡು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ದಿವಾಕರ್, ಎಸ್ಪಿ ಹರಿಬಾಬು ಉಪಸ್ಥಿತರಿದ್ದರು.