ಹಾಸನ ಆ.15 (DaijiworldNews/TA): ಆನ್ಲೈನ್ ಗೇಮ್ ಗೀಳಿಗೆ ಬಿದ್ದು ಸಾಲ ತೀರಿಸಲಾಗದೆ ಪತ್ನಿ, ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ನುಗ್ಗೇನಹಳ್ಳಿ ಸಮೀಪ ನಡೆದಿದೆ. ಶ್ರೀನಿವಾಸ್(43) ಎಂಬಾತ ಆನ್ಲೈನ್ ಗೇಮ್ ಹುಚ್ಚಿಗೆ ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ. ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು, ಎಲ್ಲಾ ಆಸ್ತಿ ಮಾರಾಟ ಮಾಡಿ, ಮೈತುಂಬ ಸಾಲಮಾಡಿಕೊಂಡು ಕಡೆಗೆ ಸಾಲ ತೀರಿಸಲಾಗದೆ ಪತ್ನಿ ಶ್ವೇತಾ(36) ಮತ್ತು ಮಗಳು ನಾಗಶ್ರೀ(13) ಜೊತೆಗೆ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರದಿಂದಲೇ ಶ್ರೀನಿವಾಸ್ ಪತ್ನಿ ಮಗಳ ಜೊತೆಗೆ ಕಾಣೆಯಾಗಿದ್ದರು. ಕುಟುಂಬ ಸದಸ್ಯರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡು ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆ.14ರಂದು ಸಂಜೆ ಮುದ್ಲಾಪುರ ಹೇಮಾವತಿ ನಾಲೆಯಲ್ಲಿ ಗಂಡ-ಹೆಂಡತಿ ಶವ ಪತ್ತೆಯಾಗಿದ್ದು, ಇಂದು ಪುತ್ರಿ ಶವ ಕೂಡ ಪತ್ತೆಯಾಗಿದೆ.
ಕಾರ್ ಚಾಲಕನಾಗಿ ಉತ್ತಮ ಜೀವನ ಸಾಗಿಸುತ್ತಿದ್ದ ಶ್ರೀನಿವಾಸ್ ಮಡದಿ ಶಿಕ್ಷಕಿಯಾಗಿದ್ದಳು. ಮೊಬೈಲ್ ಜಾಹೀರಾತು ನೋಡಿ ಆನ್ಲೈನ್ ರಮ್ಮಿ ಗೇಮ್ ಗೀಳಿಗೆ ಬಿದ್ದ ಶ್ರೀನಿವಾಸ್, ಕಾರು ಮತ್ತು ಮನೆ ಎಲ್ಲವನ್ನು ಮಾರಿಕೊಂಡು ಬೀದಿಪಾಲಾಗಿದ್ದ ಎನ್ನಲಾಗಿದೆ. ಸಾಲ ಮಾಡಿ ಆಟ ಆಡುವುದಕ್ಕೆ ಶುರುಮಾಡಿದ್ದ. ಕೆಲಸಬಿಟ್ಟು ಆನ್ಲೈನ್ ಗೇಮ್ ಆಡುತ್ತಾ ಮೈತುಂಬಾ ಸಾಲ ಮಾಡಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದೆ ಇಡೀ ಕುಟುಂಬ.