ಬೆಂಗಳೂರು, ಆ.15 (DaijiworldNews/TA): ಅಮಾನತುಗೊಂಡ ಸಿಸಿಬಿ ಹೆಡ್ಕಾನ್ಸ್ಟೇಬಲ್ ಹೆಸರು ಸಿಎಂ ಪದಕ ಪಟ್ಟಿಯಲ್ಲಿದ್ದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹೌದು 2024ನೇ ಸಾಲಿನ ಸಿಎಂ ಪದಕ ಪಟ್ಟಿಯಲ್ಲಿ ಅಮಾನತುಗೊಂಡ ಮೈಸೂರು ಸಿಸಿಬಿ ಹೆಡ್ ಕಾನ್ಸ್ಟೇಬಲ್ ಸಲೀಂ ಪಾಷಾ ಹೆಸರು ಇದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜತೆ ಸಂಪರ್ಕವಿದ್ದು, ಪರೋಕ್ಷವಾಗಿ ನೆರವಾಗಿದ್ದ ಆರೋಪದ ಹಿನ್ನೆಲೆ ಅಮಾನತಾಗಿದ್ದರು. ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಬಿವೈ ವಿಜಯೇಂದ್ರ ಸಮಾಜಘಾತುಕತನ ಹಾಗೂ ದೇಶದ್ರೋಹಿ ಮನಸ್ಥಿತಿಯ ಪೊಲೀಸ್ ಪೇದೆಯೊಬ್ಬರ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಪ್ರಕಟವಾಗಿರುವುದು ಗೃಹ ಇಲಾಖೆ ಅಧಃಪತನಕ್ಕೀಡಾಗಿರುವುದಕ್ಕೆ ನಿದರ್ಶನವಾಗಿದೆ ಎಂದು ಕಿಡಿ ಕಾರಿದ್ದಾರೆ.
ಕೆಲ ನಾಮಧೇಯಗಳನ್ನು ಕಂಡರೆ ಈ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕಳ್ಳರಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ "ಮುಖ್ಯಮಂತ್ರಿಗಳ ಪದಕ" ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ.
ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ. ಸಮಾಜಘಾತುಕತನ ಹಾಗೂ ದೇಶದ್ರೋಹಿ ಮನಸ್ಥಿತಿಯ ಪೊಲೀಸ್ ಪೇದೆಯೊಬ್ಬರ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಪ್ರಕಟವಾಗಿರುವುದು ಗೃಹ ಇಲಾಖೆ ಅಧಃಪತನಕ್ಕೀಡಾಗಿರುವುದಕ್ಕೆ ನಿದರ್ಶನವಾಗಿದೆ. ಎಂಬುವುದಾಗಿ ವಾಗ್ದಾಳಿ ನಡೆಸಿದ್ದಾರೆ.