ನವದೆಹಲಿ, ಮೇ22(Daijiworld News/SS): 2019ರ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಯಾರು ಗೆಲ್ಲಲಿದ್ದಾರೆ, ಯಾರಿಗೆ ಸೋಲು ಎನ್ನುವ ಕುತೂಹಲ ಮನೆ ಮಾಡಿದೆ. ಫಲಿತಾಂಶದ ಕೌತುಕಕ್ಕೆ ಎಲ್ಲರೂ ಕಾತರರಾಗಿದ್ದಾರೆ.
ಇತ್ತ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಹಿಂಸಾಚಾರದ ಕುರಿತು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಫಲಿತಾಂಶದ ಬಳಿಕ ಉಂಟಾಗಬಹುದಾದ ಹಿಂಸಾಚಾರದ ಕುರಿತಂತೆ ಎಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಣೆ ಮಾಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಸಂಭಾವ್ಯ ಹಿಂಸಾಚಾರ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಕೆಲ ಶಂಕಿತ ದೂರವಾಣಿ ಕರೆಗಳನ್ನು ಆಲಿಸಿದ್ದು, ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರಕ್ಕೆ ಕುಮಕ್ಕು ನೀಡುವ ನಿಟ್ಟಿನಲ್ಲಿ ಕೆಲವರು ಮಾತನಾಡಿರುವ ಕುರಿತು ಮಾಹಿತಿ ಕಲೆ ಹಾಕಿದೆ. ಇದೇ ಕಾರಣಕ್ಕೆ ಗೃಹ ಸಚಿವಾಲಯ ಹೈ ಅಲರ್ಟ್ ಘೋಷಣೆ ಮಾಡಿದೆ ಎನ್ನಲಾಗಿದೆ.
ಎಲ್ಲೆಡೆ ಇವಿಎಂಗಳ ಕುರಿತಂತೆ ವಿಪಕ್ಷ ಮುಖಂಡರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊಂದಿದ್ದು, ಇದರ ನಡುವೆಯೇ ಕೆಲ ನಾಯಕರು ನೀಡಿರುವ ಹೇಳಿಕೆ ಫಲಿತಾಂಶದ ಬಳಿಕ ಹಿಂಸಾಚಾರ ನಡೆಯುವ ಕುರಿತು ಶಂಕೆ ಮೂಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಂದಾಗಿ ಮೈತ್ರಿ ಮೂಲಕ ಬಿಜೆಪಿ ವಿರುದ್ಧ ಚುನಾವಣಾ ಅಖಾಡದಲ್ಲಿ ಸೆಣೆಸಿದ್ದು ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ. ಆದರೆ ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಮೇಲುಗೈ ಸಾಧಿಸಲಿವೆ ಎಂಬ ವರದಿಗಳು ರಾಜ್ಯದ ಮೈತ್ರಿ ನಾಯಕರಲ್ಲಿ ತಲ್ಲಣ ಸೃಷ್ಟಿಸಿವೆ.
ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಕಾಂಗ್ರೆಸ್ 21 ಕ್ಷೇತ್ರ ಹಾಗೂ ಜೆಡಿಎಸ್ 7 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.