ಬೆಂಗಳೂರು,ಮೇ23(DaijiWorldNews/AZM):ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿಯನ್ನ ಆಯ್ಕೆ ಮಾಡಿರೋದು ಸ್ಪಷ್ಟವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ಅಲೆ ಪಸರಿಸಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ. ರಾಜ್ಯ ಮೈತ್ರಿ ಸರ್ಕಾರದ ಆಡಳಿತ ವೈಖರಿ ಏನು ಅನ್ನೋದು ಈಗ ಗೊತ್ತಾಗುತ್ತಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಧೂಳಿಪಟ ಆಗುತ್ತಿರೊದು ಫಲಿತಾಂಶದಿಂದ ಕಾಣುತ್ತಿದೆ. ಮಂಡ್ಯದಲ್ಲಿ ಸುಮಲತಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಸೋಲಿನ ಹಂತಕ್ಕೆ ಬರುತ್ತಿದ್ದಾರೆ. ರಾಜ್ಯದ ಅಪವಿತ್ರ ಮೈತ್ರಿಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮತ್ತೆ ಯಡಿಯೂರಪ್ಪ ಆಡಳಿತವನ್ನ ಜನ ನಿರೀಕ್ಷೆ ಮಾಡಿದ್ದಾರೆ ಎಂದು ಹೇಳಿದರು.
ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಮೈತ್ರಿ ಪಕ್ಷ ಧೂಳಿಪಟವಾಗಿದ್ದು, ಯಡಿಯೂರಪ್ಪ ಸಿಎಂ ಆಗೋದು ಶತಸಿದ್ಧ. ಯಾರು ಸಿಎಂ ಆಗೊದನ್ನ ತಪ್ಪಿಸಲು ಆಗಲ್ಲ. ರಾಜ್ಯದ ಜನ ನಮ್ಮ ಜತೆ ಇದ್ದಾರೆ. ಕರ್ನಾಟಕದ ಅಭಿವೃದ್ಧಿ ಯಡಿಯೂರಪ್ಪ ಅವರಿಂದ ಆಗಲಿದೆ. ಈ ಫಲಿತಾಂಶ ಜನರು ಯಡಿಯೂರಪ್ಪ ಸಿಎಂ ಆಗಲಿ ಎಂದು ಸಂದೇಶ ಸಹ ನೀಡಿದ್ದಾರೆ. ರಾಜ್ಯದ ಜನರಿಗೆ ಅಭಿನಂದನೆಗಳು ಎಂದರು.