ಬೆಂಗಳೂರು, ಮೇ23(Daijiworld News/SS): ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನಿಸಿಕೊಂಡ ನಮ್ಮ ದೇಶದ 543 ಕ್ಷೇತ್ರಗಳ ಮತ ಎಣಿಕೆ ಇಂದು ನಡೆಯುತ್ತಿದ್ದು, ಬಿಜೆಪಿ ಈಗಾಗಲೇ 288ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಗೆಲುವಿನೊಂದಿಗೆ ಸತತ 2ನೇ ಬಾರಿ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಲೋಕಸಭೆ ಪ್ರವೇಶಿಸಿದ್ದಾರೆ.
ದೇಶದಲ್ಲಿ ಬಿಜೆಪಿ ಬಹುಮತ ಗಳಿಸಿರುವ ಹಿನ್ನಲೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ, ಕರ್ನಾಟಕದ ಮೈತ್ರಿ ಸರಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಜನಾದೇಶಕ್ಕೆ ಮನ್ನಣೆ ನೀಡಿ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಹೇಳಿದ್ದಾರೆ.
ಮೈತ್ರಿ ನಾಯಕರೇ ನಿಮ್ಮ ಬಳಿ ಯಾವುದಾದರೂ ಮುಖ ಉಳಿದಿದೆಯಾ..? ದುರಹಂಕಾರ ಮಣ್ಣು ಪಾಲಾಯಿತು, ಬಿಳಿ ಕಾಲರ್ ಸುಕ್ಕಾಯಿತು.. ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಕ್ಷೇತ್ರದ ಮತದಾರರು ದುರಹಂಕಾರದಿಂದ ನನ್ನನ್ನು ಟೀಕಿಸಿದ, ನನ್ನ ನಗುವನ್ನು ಅಪಹಾಸ್ಯಗೈದ, ವೈಯುಕ್ತಿಕ ನಿಂದನೆಗೆ ಇಳಿದ ಅತಿ ಬುದ್ದಿವಂತ ವಿರೋಧ ಪಕ್ಷ ನಾಯಕರುಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ನಾನು ನಿಮ್ಮ ಜನ ಸೇವಕನಾಗಿ ನಿಮಗೆ ಸದಾ ಲಭ್ಯ ಎಂದು ಹೇಳಿದ್ದಾರೆ.