ಚೆನ್ನೈ, ಆ.17(DaijiworldNews/AA): ಐಪಿಎಲ್ ಸೀಸನ್ - 2025 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಆಡಲಿದ್ದು, ಅದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐಪಿಎಲ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐಗೆ ಕೋರಿದೆ.
ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮನವಿ ಮಾಡಿಕೊಂಡಿದೆ. ಈ ಮನವಿಗೆ ಗ್ರೀನ್ ಸಿಗ್ನಲ್ ನೀಡಲು ಬಿಸಿಸಿಐ ಕೂಡ ಮುಂದಾಗದೆ ಎಂದು ತಿಳಿದುಬಂದಿದೆ.
ಐಪಿಎಲ್ 2008ರ ನಿಯಮದ ಅನುಸಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ನಂತರ ಆತನನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಇದೇ ನಿಯಮವನ್ನು ಪುನಃ ಜಾರಿಗೆ ತರುವಂತೆ ಸಿಎಸ್ಕೆ ಫ್ರಾಂಚೈಸಿ ಮನವಿ ಮಾಡಿದೆ.
ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷವಾಗಿರುವುದರಿಂದ ಈ ನಿಯಮವನ್ನು ಜಾರಿಗೊಳಿಸುವಂತೆ ಸಿಎಸ್ಕೆ ಕೇಳಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ ಧೋನಿ ಅವರನ್ನು ಕಡಿಮೆ ಮೊತ್ತ ನೀಡಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದಾಗಿದೆ.
ಸಿಎಸ್ಕೆ ಫ್ರಾಂಚೈಸಿಯು ಕಳೆದ ಸೀಸನ್ನಲ್ಲಿ 12 ಕೋಟಿ ರೂ. ನೀಡಿ ಧೋನಿ ಅವರನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡರೆ ಕೇವಲ 4 ಕೋಟಿ ರೂ. ನೀಡಿ ಉಳಿಸಿಕೊಳ್ಳಬಹುದಾಗಿದೆ. ಈ ಮೂಲಕ ಮತ್ತೋರ್ವ ರಾಷ್ಟ್ರೀಯ ಆಟಗಾರನನ್ನು ದೊಡ್ಡ ಮೊತ್ತ ನೀಡಿ ಉಳಿಸಿಕೊಳ್ಳಲಿ ಸಿಎಸ್ಕೆಗೆ ಸಹಾಯವಾಗಲಿದೆ.