ಇಸ್ಲಮಾಬಾದ್, ಸೆ.15(DaijiworldNews/AA): ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾದ ಆಟಗಾರ ಎಂದೆನೆಸಿಕೊಳ್ಳುತ್ತಿದ್ದ ಬಾಬರ್ ಆಝಂ, ಇದೀಗ ನಾಯಕತ್ವ ಕಳೆದುಕೊಳ್ಳುವುದರೊಂದಿಗೆ ತಂಡದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಈ ಮಧ್ಯೆ ಬಾಬರ್ ಆಝಂಗೆ ವಿರಾಟ್ ಕೊಹ್ಲಿಯನ್ನು ನೋಡಿ ಕಲಿಯುವಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಸಲಹೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಾಬರ್ಗೆ ನನ್ನ ಏಕೈಕ ಸಲಹೆ ಎಂದರೆ ಅವರು ಕ್ರಿಕೆಟ್ನತ್ತ ಗಮನ ಹರಿಸಬೇಕು. ಅವರು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕು. ಬಾಬರ್ ಆಝಂ ಅವರನ್ನು ನಾಯಕನನ್ನಾಗಿ ಮಾಡಲಾಯಿತು. ಏಕೆಂದರೆ ಅವರು ಆ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು ಎಂದಿದ್ದಾರೆ.
ತಂಡದ ಅತ್ಯುತ್ತಮ ಆಟಗಾರನನ್ನು ನಾಯಕನನ್ನಾಗಿ ಮಾಡಬೇಕು ಎಂದು ನಿರ್ಧರಿಸಿದಾಗ ನಾನು ಅಲ್ಲಿಯೇ ಇದ್ದೆ. ಬಾಬರ್ ಮತ್ತು ಇತರ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಫಲಿತಾಂಶವು ಎಲ್ಲರಿಗೂ ಗೋಚರಿಸುತ್ತದೆ. ನಮ್ಮ ಆಟಗಾರರು ಪ್ರದರ್ಶನಕ್ಕಿಂತ ಹೆಚ್ಚು ಮಾತನಾಡುವುದನ್ನು ನಾನು ನೋಡಿದ್ದೇನೆ. ಬಾಬರ್, ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಆದರೆ ಪ್ರಸ್ತುತ ಬಾಬರ್ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಾಯಕತ್ವ ಒಂದು ಸಣ್ಣ ವಿಷಯ, ಕಾರ್ಯಕ್ಷಮತೆ ಮುಖ್ಯವಾಗಿದೆ. ವಿರಾಟ್ ಕೊಹ್ಲಿಯನ್ನು ನೋಡಿ. ಅವರು ತಮ್ಮದೇ ಆದ ಷರತ್ತುಗಳ ಮೇಲೆ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಈಗ ವಿಶ್ವದಾದ್ಯಂತ ದಾಖಲೆಗಳನ್ನು ಮುರಿಯುತ್ತಿದ್ದಾರೆ. ದೇಶಕ್ಕಾಗಿ ಆಡುವುದು ಆದ್ಯತೆಯಾಗಿರಬೇಕು ಎಂಬುದನ್ನು ಇದು ತೋರಿಸುತ್ತದೆ. ನಿಮ್ಮಲ್ಲಿ ಯಾವುದೇ ಶಕ್ತಿ ಉಳಿದಿದ್ದರೆ, ನಿಮಗಾಗಿ ಆಟವಾಡಿ ಎಂದು ತಿಳಿಸಿದ್ದಾರೆ.