ಹೊಸದಿಲ್ಲಿ, ಮೇ30(Daijiworld News/SS): ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್ ಪ್ರಶಸ್ತಿ ಗೆಲ್ಲುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟುಗಳನ್ನು ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಪ್ರಶಸ್ತಿಗೂ ಭಾಜನವಾಗಿದ್ದರು.
ಇಮ್ರಾನ್ ತಾಹೀರ್ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. 40ರ ಹರೆಯದಲ್ಲೂ ಕ್ರಿಕೆಟ್ ಮೇಲಿನ ಉತ್ಸಾಹ ಕಿಂಚಿತ್ತು ಕುಗ್ಗದ ತಾಹೀರ್ ವಿಕೆಟ್ ಪಡೆದಾಗ ಓರ್ವ ಸ್ಪ್ರಿಂಟರ್ ತರಹನೇ ಓಡೋಡಿ ಸಂಭ್ರಮಿಸುತ್ತಾರೆ.
ತಾಹೀರ್ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಇನ್ನಿಂಗ್ಸ್ನ ಪ್ರಥಮ ಓವರ್ ದಾಳಿ ನಡೆಸುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ. ವಿಶ್ವಕಪ್ನಲ್ಲಿ ಪ್ರಥಮ ಓವರ್ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ದಾಖಲೆಗೆ ಇಮ್ರಾನ್ ಪಾತ್ರವಾಗಿದ್ದಾರೆ. ಜೊತೆಗೆ ಮೊದಲ ಓವರ್ನಲ್ಲೇ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು. ಬಳಿಕ ಸೆಟ್ ಬ್ಯಾಟ್ಸ್ಮನ್ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ವಿಕೆಟ್ ಪಡೆಯುವ ಮೂಲಕ ತಾಹೀರ್ ಗಮನಾರ್ಹ ಪ್ರದರ್ಶನ ನೀಡಿದ್ದರು.