ದೆಹಲಿ, ಸೆ.28(DaijiworldNews/AA): 2025ರ ಐಪಿಎಲ್ ನಲ್ಲಿ ಆಡುವ ಪ್ರತಿ ಆಟಗಾರರು ಪಂದ್ಯ ಶುಲ್ಕ ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಯ್ ಶಾ ಅವರು, ಮುಂದಿನ ಸೀಸನ್ನಿಂದ ಆಟಗಾರರು ಐಪಿಎಲ್ನಲ್ಲಿ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ. ಆಟಗಾರರು ಒಂದು ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಪಡೆಯುತ್ತಾರೆ. ಈ ರೀತಿಯಾಗಿ ಒಬ್ಬ ಆಟಗಾರ ಲೀಗ್ ಹಂತದ ಎಲ್ಲಾ 14 ಪಂದ್ಯಗಳನ್ನು ಆಡಿದರೆ ಅವನಿಗೆ ಒಟ್ಟಾರೆಯಾಗಿ 1.05 ಕೋಟಿ ರೂ. ಪಂದ್ಯ ಶುಲ್ಕವಾಗಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಒಬ್ಬ ಆಟಗಾರ ಲೀಗ್ ಹಂತದ 14 ಪಂದ್ಯಗಳನ್ನು ಹೊರತುಪಡಿಸಿ, ಪ್ಲೇಆಫ್ನಲ್ಲಿ ಫೈನಲ್ ಸೇರಿದಂತೆ ಇನ್ನೂ 3 ಪಂದ್ಯಗಳನ್ನು ಆಡಿದರೆ, ಅವನಿಗೆ ಒಟ್ಟು 1.23 ಕೋಟಿ ರೂ. ವೇತನ ಸಿಗಲಿದೆ. ಅಂದರೆ ಒಬ್ಬ ಆಟಗಾರನ ಹರಾಜು ಶುಲ್ಕ ಕೋಟಿಗಟ್ಟಲೆ ಇರಲಿ ಅಥವಾ ಮೂಲ ಬೆಲೆ ಕೇವಲ 20 ಲಕ್ಷ ರೂ.ಗಳಿರಲಿ, ಪಂದ್ಯಾವಳಿಯಲ್ಲಿ ಅವರು ಆಡಿದ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿ ಆತ ವೇತನ ಪಡೆಯಲಿದ್ದಾನೆ. ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿಯನ್ನು ಇಡುತ್ತವೆ ಎಂದು ಪೋಸ್ಟ್ ಮಾಡಿದ್ದಾರೆ.