ಮುಂಬೈ, ಅ.02(DaijiworldNews/TA):ಆರ್ಸಿಬಿ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿಸಿ ಎಂದು ಕೈಫ್ ಸಲಹೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರೋಹಿತ್ ಶರ್ಮಾ ಅವರ ಖರೀದಿಗೆ ಪ್ಲ್ಯಾನ್ ರೂಪಿಸಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.
ರೋಹಿತ್ ಶರ್ಮಾ ಮುಂಬರುವ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಆರ್ಸಿಬಿ ಮುಂದಾಗಬೇಕು. ಅಲ್ಲದೆ ಅವರಿಗೆ ನಾಯಕತ್ವವನ್ನು ನೀಡಬೇಕೆಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ನಲ್ಲಿ ನಾಯಕರಾಗಿ ಮಾತ್ರ ಕಣಕ್ಕಿಳಿಯಬೇಕು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಯಶಸ್ವಿ ನಾಯಕರಲ್ಲಿ ಒಬ್ಬರು. ಇತ್ತ ಆರ್ಸಿಬಿ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಖರೀದಿಸಿ ಆರ್ಸಿಬಿ ಅವರನ್ನು ನಾಯಕನನ್ನಾಗಿ ಮಾಡುವುದು ಉತ್ತಮ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 17 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಬಹುದು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.