ಮುಂಬೈ,ಅ.05(DaijiworldNews/AK): ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭಾರತ ತಂಡ ಹೀನಾಯ ಸೋಲನುಭವಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 58 ರನ್ಗಳಿಂದ ಸೋತಿದೆ.
ಈ ಬಾರಿಯ ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಗ್ರೂಪ್ ಹಂತಗಳಲ್ಲಿ ನಡೆಯುತ್ತಿದೆ. 10 ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಸುತ್ತಿನ ಪಂದ್ಯಗಳ ಮುಕ್ತಾಯದ ವೇಳೆಗೆ ಆಯಾ ಗ್ರೂಪ್ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಟೀಮ್ ಇಂಡಿಯಾ ಅಕ್ಟೋಬರ್ 6 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಇನ್ನು ಅಕ್ಟೋಬರ್ 9 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಆಡಲಿದೆ. ಹಾಗೆಯೇ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
ಈ ಮೂರು ಮ್ಯಾಚ್ಗಳಲ್ಲಿ ಭಾರತ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, 6 ಅಂಕಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಬಹುದು. ಒಂದು ವೇಳೆ ಇದರಲ್ಲಿ ಒಂದು ಮ್ಯಾಚ್ನಲ್ಲಿ ಸೋತರೂ ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಅರ್ಹತೆಯನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಪಂದ್ಯಗಳು ನಿರ್ಣಯಕ ಪಂದ್ಯವಾಗಲಿದೆ.