ಹುಬ್ಬಳ್ಳಿ, ಅ.08(DaijiworldNews/AA): ಟೀಂ ಇಂಯಾ ಆಟಗಾರ ಕೆಎಲ್ ರಾಹುಲ್ ಅವರು ತಮ್ಮನ್ನು ಚಾರಿಟಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಲವರಿಗೆ ನೆರವಾಗಿದ್ದಾರೆ. ಬಾಗಲಕೋಟೆಯ ವಿದ್ಯಾರ್ಥಿ ಅಮೃತ್ ಮಾವಿನಕಟ್ಟೆ ಅವರ ದ್ವಿತೀಯ ವರ್ಷದ ಕಾಲೇಜ್ ಫೀಸ್ ಭರಿಸುವ ಮೂಲಕ ರಾಹುಲ್ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಿವಾಸಿ ಅಮೃತ್ ಮಾವಿನಕಟ್ಟಿ ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿರುವ ಕೆಎಲ್ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ಪದವಿ ವ್ಯಾಸಂಗ ಮಾಡಿತ್ತಿದ್ದಾರೆ. ಅಮೃತ್ ಅವರ ಪ್ರಥಮ ವರ್ಷದ ಸಂಪೂರ್ಣ ಕಾಲೇಜ್ ಫೀಸ್ ಅನ್ನು ಕೆಎಲ್ ರಾಹುಲ್ ಭರಿಸಿದ್ದರು. ಇದೀಗ ದ್ವಿತೀಯ ವರ್ಷದ ಕಾಲೇಜ್ ಫೀಸ್ ಅನ್ನು ಕೂಡ ರಾಹುಲ್ ಭರಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿ ಅಮೃತ್ ಕೆ.ಎಲ್.ರಾಹುಲ್ ಅವರು ಕಳೆದ ವರ್ಷ ಕಾಲೇಜಿಗೆ ಪ್ರವೇಶ ಪಡೆಯಲು ಸಹಕರಿಸಿದ್ದರು. ಅಲ್ಲದೆ ಎರಡನೇ ವರ್ಷವೂ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಈ ಮಾತಿನಂತೆ ಈಗ ನನ್ನ ಎರಡನೇ ವರ್ಷದ ಅಧ್ಯಯನಕ್ಕಾಗಿ 75,000 ರೂ. ಭರಿಸಿದ್ದಾರೆ. ನನ್ನ ಅಧ್ಯಯನವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯ ಮಾಡಿದ ಕೆಎಲ್ ರಾಹುಲ್, ಮಂಜುನಾಥ್ ಹೆಬಸೂರು ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ಧನ್ಯವಾದ. ನಾನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.