ದೆಹಲಿ, ಅ.28(DaijiworldNews/AA): ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ನಿರ್ಧಾರ ಮಾಡಿದೆ.
ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಗಾಗಿ ತೆರಳಲಿದ್ದು, ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅಲಭ್ಯರಾಗಲಿದ್ದಾರೆ. ಈ ಹಿನ್ನಲೆ ಸೌತ್ ಆಫ್ರಿಕಾ ವಿರುದ್ದದ ಸರಣಿಗಾಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ಕಳುಹಿಸಲು ನಿರ್ಧಾರ ಮಾಡಲಾಗಿದೆ.
ನವೆಂಬರ್ 8 ರಿಂದ ಆರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಸುಭದೀಪ್ ಘೋಷ್ ಅವರು ಕೋಚಿಂಗ್ ಸಿಬ್ಬಂದಿಯ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ವಿವಿಎಸ್ ಲಕ್ಷ್ಮಣ್ ಅವರು ಭಾರತ ತಂಡದ ತಾತ್ಕಾಲಿಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯ ವೇಳೆ ಲಕ್ಷ್ಮಣ್ ಅವರನ್ನು ಹಲವು ಸರಣಿಗಳಿಗೆ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇದೀಗ ಎನ್ಸಿಎ ಮುಖ್ಯಸ್ಥನ ಹುದ್ದೆಯಲ್ಲಿ ಮುಂದುವರೆದಿರುವ ಲಕ್ಷ್ಮಣ್ ಅವರು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ವೇಳೆ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಬೇಕಿದೆ.