ಕ್ಯಾನ್ ಬೆರಾ, ಅ.29(DaijiworldNews/AA): ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಮ್ಯಾಥ್ಯೂ ವೇಡ್ ಅವರು ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದು, 2021 ರಲ್ಲಿ ಆಸೀಸ್ ಪಡೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಮ್ಯಾಥ್ಯೂ ವೇಡ್ ಅವರ ಅಂತರರಾಷ್ಟ್ರೀಯ ವೃತ್ತಿ ಬದುಕು 2011ರ ಅಕ್ಟೋಬರ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಪಂದ್ಯದೊಂದಿಗೆ ಪ್ರಾರಂಭವಾಗಿತ್ತು. ಅಂದಿನಿಂದ ಜೂನ್ 2014 ರವರೆಗೆ ಅವರು 92 ಟಿ20 ಪಂದ್ಯಗಳನ್ನಾಡಿ, ಒಟ್ಟು 1202 ರನ್ ಗಳಿಸಿದ್ದಾರೆ.
ಜೊತೆಗೆ 97 ಏಕದಿನ ಪಂದ್ಯಗಳನ್ನಾಡಿರುವ ಮ್ಯಾಥ್ಯೂ ವೇಡ್ 1867 ರನ್ ಗಳಿಸಿದ್ದಾರೆ. 2012ರ ಫೆಬ್ರವರಿಯಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಹಾಗೇಯೇ 2021ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಟವಾಡಿದ್ದರು.
ಇದೀಗ ಮ್ಯಾಥ್ಯೂ ವೇಡ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಮ್ಯಾಥ್ಯೂ ವೇಡ್ ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಟಿ20 ಸರಣಿ ವೇಳೆ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ವೇಡ್ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ನಿವೃತ್ತಿ ಬೆನ್ನಲ್ಲೇ ಮ್ಯಾಥ್ಯೂ ವೇಡ್ ಸಹಾಯಕ ಕೋಚ್ ಆಗಿ ತಮ್ಮ ಹೊಸ ವೃತ್ತಿ ಬದುಕನ್ನ ಆರಂಭಿಸುತ್ತಿದ್ದಾರೆ.