ಮುಂಬೈ,ನ.02(DaijiworldNews/TA):ಲೆಜೆಂಡ್ ವಿರಾಟ್ ಕೊಹ್ಲಿ ಕೋಟಿ ದಾಖಲೆ ಮಾಡಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿಯನ್ನು ಬರೋಬ್ಬರಿ 21 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ.
2021 ರಲ್ಲಿ ಕೊಹ್ಲಿಯನ್ನು ಆರ್ಸಿಬಿ 17 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದ್ದರು. ಆದರೆ ಈ ಬಾರಿ 21 ಕೋಟಿ ರೂ. ಪಡೆಯುವ ಮೂಲಕ ಐಪಿಎಲ್ನಲ್ಲಿ ಇಪ್ಪತ್ತು ಕೋಟಿಗೂ ಅಧಿಕ ಮೊತ್ತ ಪಡೆದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ ವಿರಾಟ್. ಈ 21 ಕೋಟಿ ರೂ.ನೊಂದಿಗೆ ವಿರಾಟ್ ಕೊಹ್ಲಿಯ ಒಟ್ಟು ಐಪಿಎಲ್ ಗಳಿಕೆಯು 200 ಕೋಟಿ ರೂ. ದಾಟಿದೆ. ಈ ಮೂಲಕ ವಿರಾಟ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿರುವ ರೋಹಿತ್ ಶರ್ಮಾ 18 ಸೀಸನ್ಗಳಿಂದ ಒಟ್ಟು 210.9 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದೀಗ ವಿರಾಟ್ ಕೊಹ್ಲಿ 209.2 ಕೋಟಿ ರೂ.ನೊಂದಿಗೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿದು 209 ಕೋಟಿ ರೂ.ಗೂ ಅಧಿಕ ಮೊತ್ತ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು ಎನ್ನಲಾಗಿದೆ.