ಮುಂಬೈ,ನ.07(DaijiworldNews/TA):ಗುರುವಾರ ಒಡಿಶಾ ವಿರುದ್ಧದ ರಣಜಿ ಟ್ರೋಫಿ ಮುಖಾಮುಖಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂಬೈ ಪರ ಅದ್ಭುತ ದ್ವಿಶತಕ ಸಿಡಿಸಿದ್ದಾರೆ. 2017-18ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 202 ರನ್ ಗಳಿಸಿದ ನಂತರ ಶ್ರೇಯಸ್ ಅವರ ಮೊದಲ ಪ್ರಥಮ ದರ್ಜೆ ದ್ವಿಶತಕ ಇದಾಗಿದೆ.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿದ್ಧೇಶ್ ಲಾಡ್ ಶತಕ ಸಿಡಿಸಿದರೆ, 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಸ್ಪೋಟಕ ಇನಿಂಗ್ಸ್ ಆಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಅಯ್ಯರ್ ಒಡಿಶಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
ಈ ಮೂಲಕ ಮೊದಲ ದಿನದಾಟದಲ್ಲೇ ಶತಕ ಬಾರಿಸಿದ್ದರು. 152 ರನ್ಗಳೊಂದಿಗೆ ದ್ವಿತೀಯ ದಿನದಾಟ ಆರಂಭಿಸಿದ ಶ್ರೇಯಸ್ ಅಯ್ಯರ್ ಕೇವಲ 200 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. 228 ಎಸೆತಗಳಲ್ಲಿ 233 ರನ್ ಗಳಿಸಿದ ನಂತರ ಅಯ್ಯರ್ ಅಂತಿಮವಾಗಿ ಹರ್ಷಿತ್ ರಾಥೋಡ್ ಅವರಿಂದ ಔಟಾದರು.