ಮುಂಬೈ, ನ.09(DaijiworldNews/TA):ನ್ಯೂಜಿಲೆಂಡ್ ವಿರುದ್ಧದ ಈ ಹೀನಾಯ ಸೋಲಿನ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯರೂಪಕ್ಕೆ ಬಂದಂತೆ ತೋರುತ್ತಿದೆ. ಆ ಬಳಿಕ ಟೀಂ ಇಂಡಿಯಾ ಸೋಲಿನ ಬಗ್ಗೆ ಚರ್ಚಿಸಲು ಬಿಸಿಸಿಐ ಸಭೆ ಕರೆದಿದೆ.
ಕಾರ್ಯದರ್ಶಿ ಜಯ್ ಶಾ, ರೋಜರ್ ಬಿನ್ನಿ ಜೊತೆಗೆ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಬಿಸಿಸಿಐ ಸಭೆಯಲ್ಲಿ ಭಾಗವಹಿಸಿದ್ದರು.
ಮಾಧ್ಯಮ ವರದಿಗಳ ಪ್ರಕಾರ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಈ ಸಭೆ ನಡೆದಿದೆ. ಇದರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲು ಮತ್ತು ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಬಗ್ಗೆ ಆಳವಾದ ಚರ್ಚೆ ನಡೆಯಿತು. ಈ ಬಿಸಿಸಿಐ ಸಭೆ ಸುಮಾರು 6 ಗಂಟೆಗಳ ಕಾಲ ನಡೆಯಿತು.
ಟೀಮ್ ಇಂಡಿಯಾ ಮೊದಲ ಎರಡು ಟೆಸ್ಟ್ಗಳಲ್ಲಿ ಸೋತಿದ್ದರೂ, ಉಪನಾಯಕ ಮತ್ತು ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಮೂರನೇ ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಲಾಗಿದೆ.
ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಆಸ್ಟ್ರೇಲಿಯಾ ಸರಣಿಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಮೂರನೇ ಟೆಸ್ಟ್ನಿಂದ ಬುಮ್ರಾಗೆ ವಿಶ್ರಾಂತಿ ನೀಡಿದ್ದೇವೆ ಎಂಬುವುದಾಗಿ ತಿಳಿಸಿದ್ದಾರೆ. ಆದರೆ ತಂಡದ ಈ ನಿರ್ಧಾರದ ಬಗ್ಗೆ ಮಂಡಳಿಯ ಅಧಿಕಾರಿಗಳು ಹೆಚ್ಚು ಸಂತೋಷವಾಗಿಲ್ಲ ಎಂದು ಹೇಳಲಾಗಿದೆ.
ಪಿಚ್ ಬಗ್ಗೆಗಿನ ಪ್ರಶ್ನೆಯನ್ನು ಸಹ ಸಭೆಯಲ್ಲಿ ಕೇಳಲಾಗಿದೆ. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವೂ ಸ್ಪಿನ್ ಸ್ನೇಹಿ ಪಿಚ್ನಲ್ಲಿ ನಡೆಸಲಾಗಿತ್ತು. ಈ ಪಿಚ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ದಯನೀಯವಾಗಿ ವಿಫಲರಾಗಿದ್ದಾರೆ. ಹೀಗಿರುವಾಗ ಮುಂಬೈ ಟೆಸ್ಟ್ನಲ್ಲಿ ‘ರ್ಯಾಂಕ್ ಟರ್ನರ್’ ಪಿಚ್ ರೂಪಿಸಲು ಸೂಚಿಸಿರುವುದೇಕೆ ಎಂಬುವುದಾಗಿ ಪ್ರಶ್ನಿಸಲಾಗಿದೆ.
ಮೂರನೇ ಪ್ರಶ್ನೆ ಮೂಡಿಬಂದಿರುವುದು ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟ್ರಾಟಜಿ ವಿರುದ್ಧ. ವರದಿಯ ಪ್ರಕಾರ, ಮಂಡಳಿಯ ಅಧಿಕಾರಿಗಳು ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಿಲ್ಲ. ಬದಲಾಗಿ ಅವರ ಕಾರ್ಯ ವಿಧಾನಗಳನ್ನು ಪ್ರಶ್ನಿಸಲಾಗಿದೆ. ಒಟ್ಟಿನಲ್ಲಿ ಗೌತಮ್ ಗಂಭೀರ್ ನಡೆಯಿಂದ ಬಿಸಿಸಿಐ ಸಂಪೂರ್ಣ ಸಂತುಷ್ಟರಾಗಿಲ್ಲ ಎಂದು ಹೇಳಲಾಗಿದೆ.
ಇದೀಗ ಆಸ್ಟ್ರೇಲಿಯಾದಲ್ಲಿ ಕಾಂಗರೂ ತಂಡವನ್ನು ಸೋಲಿಸಲು ಟೀಂ ಇಂಡಿಯಾಗೆ ಕಠಿಣ ಸವಾಲು ಎದುರಾಗಿದೆ. ಬಾರ್ಡರ್ ಗವಾಸ್ಕರ್ ಕಪ್ನಲ್ಲಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಂದು ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಲಿದೆ.