ಲಂಡನ್, ಜೂ 04 (Daijiworld News/SM): 2019ರ ವಿಶ್ವ ಕಪ್ ಆರಂಭವಾಗಿ ಈಗಾಗಲೇ 6 ದಿನಗಳು ಕಳೆದಿದ್ದು, 7 ಪಂದ್ಯಗಳು ನಡೆದಿವೆ. 8ನೇ ಪಂದ್ಯದಲ್ಲಿ ಟೀಂ ಇಂಡಿಯಾ ಅಗ್ನಿ ಪರೀಕ್ಷೆಗೆ ಮುಂದಾಗಲಿದೆ. ಜೂನ್ 5ರ ಬುಧವಾರದಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯವನ್ನು ಗೆದ್ದು ಬೀಗಬೇಕೆನ್ನುವ ಮಹದಾಕಾಂಕ್ಷೆ ಕೊಹ್ಲಿ ಪಡೆ ಹೊಂದಿದೆ.
ಆದರೆ, ಎದುರಾಳಿ ತಂಡ ದಕ್ಷಿಣ ಆಫ್ರಿಕಾ ಬಲಿಷ್ಟವಾಗಿದೆ. ದುರಾದೃಷ್ಟವೆಂದರೆ ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಸೋಲುಂಡಿರುವ ದ. ಆಫ್ರಿಕಾ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆ ಮೂಲಕ ಹ್ಯಾಟ್ರಿಕ್ ಸೋಲಿನ ಸುಳಿಯಿಂದ ಪಾರಾಗಲು ಪ್ರಯತ್ನಗಳನ್ನು ನಡೆಸುತ್ತಿದೆ. ವಿಶ್ವಕಪ್ ಆರಂಭದ ಪಂದ್ಯದಲ್ಲಿ ಆಡಿದ್ದ ದ.ಆಫ್ರಿಕಾ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಸೋಲನುಭವಿಸಿದೆ. ಅಲ್ಲದೆ, ಜೂನ್ 2ರಂದು ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೂಡ ಬಲಿಷ್ಟ ತಂಡಕ್ಕೆ ಸೋಲಾಗಿರುವುದು.
ಇದರಿಂದ ಸೋಲಿನ ಮುಖಭಂಗವನ್ನು ತಪ್ಪಿಸಲು ದ.ಆಫ್ರಿಕಾ ತಂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದೆ. ಇನ್ನು ಇತ್ತ ಟೀಂ ಇಂಡಿಯಾ ಕೂಡ ತನ್ನ ಬಲಿಷ್ಟ ಸೈನ್ಯದೊಂದಿಗೆ ಕದನಕ್ಕೆ ಇಳಿಯಲಿದೆ. ಎರಡು ಪಂದ್ಯಗಳನ್ನು ಸೋತಿರುವ ದ. ಆಫ್ರಿಕಾ ತಂಡಕ್ಕೆ ಟೀಂ ಇಂಡಿಯಾದ ಅನುಭವಿ ಧೋನಿ ಹಾಗೂ ರನ್ ಮೆಷಿನ್ ಕೊಹ್ಲಿಯದ್ದೇ ಭೀತಿ ಉಂಟಾಗಿದೆ.
ಇನ್ನೊಂದೆಡೆ ಟೀಂ ಇಂಡಿಯಾ ಈಗಾಗಲೇ ನಡೆದಿರುವ ಪಂದ್ಯಗಳಿಂದ ಕೆಲವು ಸುಲಭ ಸೂತ್ರಗಳನ್ನು ಪಡೆದುಕೊಂಡಿದೆ. ಅಲ್ಲದೆ, ದ.ಆಫ್ರಿಕಾದ ಕಳಪೆ ಪ್ರದರ್ಶನ ಕೊಹ್ಲಿ ಪಡೆಯ ಆತ್ಮ ವಿಶ್ವಾಸ ಹೆಚ್ಚಿಸಿದೆ.