ಮುಂಬೈ, ನ.12(DaijiworldNews/AK):ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತೆ ಕ್ರಿಕೆಟ್ ಆಡೋದಕ್ಕೆ ಸಜ್ಜಾಗಿದ್ದಾರೆ. ನಾಳೆಯಿಂದ ಶುರುವಾಗಲಿರುವ ರಣಜಿ ಟ್ರೋಫಿಯ ಗ್ರೂಪ್-ಸಿ ಪಂದ್ಯದಲ್ಲಿ ಬಂಗಾಳ ಪರ ಶಮಿ ಕಣಕ್ಕಿಳಿಯುವುದು ಖಚಿತವಾಗಿದೆ.
ಮೊಹಮ್ಮದ್ ಶಮಿ ಕಳೆದೊಂದು ವರ್ಷದಿಂದ ಮೈದಾನದಿಂದ ದೂರ ಉಳಿದಿದ್ದರು. ಪಾದದ ನೋವಿನ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಶಮಿ, ಇದೀಗ ಇಂದೋರ್ನಲ್ಲಿ ನಡೆಯಲಿರುವ ಮಧ್ಯ ಪ್ರದೇಶ್ ವಿರುದ್ಧದ ಪಂದ್ಯದ ಮೂಲಕ ಮತ್ತೆ ಕಣಕ್ಕಿಳಿಯಲು ಸಿದ್ದರಾಗಿದ್ದಾರೆ.
2023 ರ ಏಕದಿನ ವಿಶ್ವಕಪ್ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ.ಇದೀಗ ಫಿಟ್ನೆಸ್ ಸಾಧಿಸಿರುವ ಶಮಿ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.