ಮುಂಬೈ, ನ.18(DaijiworldNews/AK):13ನೇ ವಯಸ್ಸಿನ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ಮೆಗಾ ಹರಾಜಿಗಾಗಿ 574 ಆಟಗಾರರ ಪಟ್ಟಿ ಅಂತಿಮಗೊಂಡಿದೆ. ಇದರಲ್ಲಿ 366 ಮಂದಿ ಭಾರತೀಯ ಆಟಗಾರರಿದ್ದಾರೆ. ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ಬಿಹಾರ ಮೂಲದ ಸೂರ್ಯವಂಶಿ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅದರ ಫಲವಾಗಿಯೇ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಈ ಮೂಲಕ ಯಾವುದಾದರೂ ಫ್ರಾಂಚೈಸಿ ಸೂರ್ಯವಂಶಿಯನ್ನು ಖರೀದಿಸಿದರೆ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. 5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.
2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ , ಅಂಡರ್-19 ಟೆಸ್ಟ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ.